ಮಡಿಕೇರಿ, ಜೂ. 17: ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅವರ ಸಹೋದರನ ಮಗಳು ಡಾ. ಅಫ್ರೀನ್ ಅಮೀರ್ ಇದೀಗ ಕೊರೊನಾ ವಿರುದ್ಧ ಕಂಡು ಹಿಡಿಯುತ್ತಿರುವ ಡೆಕ್ಸಾಮಿತಾಸೋನ್ ಎಂಬ ಔಷಧಿಯ ಸಂಶೋಧನಾ ತಂಡದಲ್ಲಿ ಓರ್ವ ಸದಸ್ಯೆಯಾಗಿದ್ದಾರೆ.

ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅಫ್ರೀನಾ, ಸಂತ ಜೋಸೇಫರ ಕಾನ್ವೆಂಟ್‍ನಲ್ಲಿ ಎಸ್.ಎಸ್.ಎಲ್.ಸಿ. ಶಿಕ್ಷಣ ಪಡೆದು ಜಿಲ್ಲೆಗೆ 10ನೇ ತರಗತಿಯಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಳು.

ಪ್ರಸ್ತುತ ಮ್ಯಾಂಚೇಸ್ಟರ್‍ನಲ್ಲಿ ಸಂಶೋಧನಾ ತಂಡದ ಸದಸ್ಯೆಯಾಗಿರುವ ಈಕೆಯ ತಂಡ ಬ್ರಿಟನ್‍ನ ಸಂಶೋಧನಾ ತಂಡದಲ್ಲಿಯೇ ಅತ್ಯಂತ ದೊಡ್ಡ ತಂಡವಾಗಿ ಹಿರಿಮೆ ಪಡೆದಿದೆ.

ಡೆಕ್ಸಾಮಿತಾಸೋನ್ ಎಂಬ ಔಷಧಿಯೀಗ ಕೊರೊನಾ ವೈರಸ್ ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ ನೀಡಲ್ಪಡುವ ಸ್ಟಿರಾಯ್ಡ್ ಔಷಧಿಯಾಗಿದ್ದು, ಪ್ರತೀ ಮೂವರು ರೋಗಿಗಳಲ್ಲಿ ಒಬ್ಬರು ಜೀವಂತ ಉಳಿಯಲು ಈ ಔಷಧಿ ಕಾರಣವಾಗುತ್ತಿರುವುದು ಉತ್ತಮ ಸುದ್ದಿಯಾಗಿದೆ.

ಕೊಡಗಿನ ಯುವ ವೈದ್ಯೆಯೋರ್ವಳು ಇಂಥ ಮಹತ್ವದ ಸಂಶೋಧನೆಯಲ್ಲಿ ಸಕ್ರಿಯರಾಗಿರುವುದು ಹೆಮ್ಮೆಯ ವಿಚಾರವಾಗಿದೆ.