ಕೂಡಿಗೆ, ಜೂ. 17: ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ಅಲ್ಲಲ್ಲಿ ನಿಂತ ನೀರಿನ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಲಕ್ಷಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಡೆಂಗ್ಯೂ ಚಿಕುನ್ ಗುನ್ಯ ರೋಗದ ಶಂಕೆ ಕಂಡುಬರುತ್ತಿದೆ.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಆರೋಗ್ಯ ಕೇಂದ್ರದ ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜ್ವರದ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ತಿಳುವಳಿಕೆ ನೀಡಲಾಯಿತು. ಮಳೆಯ ನೀರು ಒಂದೇ ಜಾಗದಲ್ಲಿ ನಿಲ್ಲದಂತೆ ಕ್ರಮ ವಹಿಸುವಿಕೆ ಮತ್ತು ಎಳನೀರಿನ ತೆಂಗಿನ ಕಾಯಿಯ ಚಿಪ್ಪಿನಲ್ಲಿ ನೀರು ಸಂಗ್ರಹವಾಗದಂತೆ, ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಈಗಾಗಲೇ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಪ್ರದೇಶ ದಲ್ಲಿ ಡೆಂಗ್ಯೂ ಪತ್ತೆ ಆಗಿರುವುದರಿಂದ ಸಾರ್ವಜನಿಕರು ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಆರೋಗ್ಯ ಇಲಾಖೆಯವರು ತಿಳುವಳಿಕೆ ನೀಡುತ್ತಿದ್ದಾರೆ.
ಈ ಸಂದರ್ಭ ಆರೋಗ್ಯ ನಿರೀಕ್ಷಕ ಮುಖೇಶ್, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿಯರಾದ ಸಕೀಲಾ, ಎಂ.ವಿ. ಸುಮತಿ ಸೇರಿದಂತೆ 50ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.