ಮಡಿಕೇರಿ, ಜೂ. 17: ನಿವೃತ್ತ ಪೊಲೀಸ್ ಕೀಪಾಡಂಡ ನಂಜುಂಡ ಅವರ ಕುರಿತು ಸುಳಿವಿಗಾಗಿ ಕೊಡಗು ಪೊಲೀಸ್ ತಂಡ ದುರ್ಗಮ ಅರಣ್ಯದಲ್ಲಿ ಹುಡುಕಾಟ ನಡೆಸಿ ಬರಿಗೈನಲ್ಲಿ ಹಿಂತಿರುಗಿದೆ. ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿರುವ ನಂಜುಂಡ ಅವರ ಬಟ್ಟೆ ಇತ್ತೀಚೆಗೆ ಕಾಡಿನಲ್ಲಿ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನಿರ್ದೇಶನದಂತೆ ಜಿಲ್ಲಾ ನಕ್ಸಲ್ ನಿಗ್ರಹ ದಳ, ಮಿಸಲು ಪೊಲೀಸ್ ಶಸಸ್ತ್ರ ಪಡೆ ಹಾಗೂ ಭಾಗಮಂಡಲ ಮತ್ತು ಮಡಿಕೇರಿ ನಗರ ಪೊಲೀಸರ ಆಯ್ದ ತಂಡವೊಂದು ಚೇರಂಬಾಣೆಯ ಪಾಕತಮ್ಮೆ ದೇವರ ಕಾಡಿನಲ್ಲಿ ಹುಡುಕಾಟ ನಡೆಸಿತ್ತು.
ಈ ವೇಳೆ ಸಂಬಂಧಿಸಿದ ವ್ಯಕ್ತಿಯ ಶರೀರಕ್ಕೆ ಪೂರಕ ಯಾವ ಮಾಹಿತಿ ಲಭಿಸಿಲ್ಲ. ಬದಲಾಗಿ ಒಂಟಿ ಪಾದರಕ್ಷೆಯೊಂದು ಪತ್ತೆಯಾಗಿದೆ. ಇದು ಕಾಣೆಯಾಗಿರುವ ವ್ಯಕ್ತಿಯದ್ದೇ ಎಂಬ ಅನುಮಾನವಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.