ಸೋಮವಾರಪೇಟೆ,ಜೂ.17: ಮುಂಗಾರು ಮಳೆ ಪ್ರಾರಂಭವಾಗಿದ್ದು, ತಾಲೂಕಿನ ಶಾಂತಳ್ಳಿ ಹೋಬಳಿ ಯಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಈ ಮಧ್ಯೆ ರಸ್ತೆ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಸಾಗಾಟಗೊಳಿಸಲು ಭಾರೀ ವಾಹನಗಳು ಸಂಚರಿಸುತ್ತಿದ್ದು, ಇತರ ರಸ್ತೆಗಳು ಹಾಳಾಗುವ ಆತಂಕದಿಂದ ಗ್ರಾಮಸ್ಥರು, ಅಂತಹ ವಾಹನಗಳ ಓಡಾಟಕ್ಕೆ ತಡೆಯೊಡ್ಡಿದ್ದಾರೆ.

ತಾಲೂಕಿನ ಕುಮಾರಳ್ಳಿ-ಪುಷ್ಪಗಿರಿ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಈ ರಸ್ತೆ ಕಾಮಗಾ ರಿಗೆ ಭಾರೀ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಸಾಗಾಟಗೊಳಿ ಸಲಾಗುತ್ತಿದೆ.

10 ಚಕ್ರದ ವಾಹನಗಳಲ್ಲಿ 30 ಟನ್‍ಗೂ ಅಧಿಕ ಭಾರದ ಸಾಮಗ್ರಿಗಳನ್ನು ಸಾಗಾಟಗೊಳಿಸಲಾಗುತ್ತಿದ್ದು, ಇದರಿಂದಾಗಿ ಇತರ ರಸ್ತೆಗಳು ಹಾಳಾಗುವ ಭೀತಿಯಿಂದ ಇಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ನೇತೃತ್ವದಲ್ಲಿ ಗ್ರಾಮಸ್ಥರು, ಭಾರೀ ವಾಹನಗಳ ಓಡಾಟಕ್ಕೆ ತಡೆಯೊಡ್ಡಿದರು.

ವಾಡಿಕೆಯಂತೆ ಹೆಚ್ಚು ಮಳೆಯಾಗುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಶಾಂತಳ್ಳಿಯ ಪಟ್ಟಣಕೊಲ್ಲಿ ಎಂಬಲ್ಲಿ ರಸ್ತೆ ಕುಸಿದು ಸಾಮಾಗ್ರಿ ತುಂಬಿದ್ದ ಲಾರಿ ಮಗುಚಿ ಬಿದ್ದಿತ್ತು. ಇದೀಗ ಅದೇ ಸ್ಥಳದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಮಳೆಯೂ ಜೋರಾಗಿರುವದರಿಂದ ಭಾರೀ ಪ್ರಮಾಣದ ವಾಹನಗಳು ಚಲಿಸಿದರೆ ರಸ್ತೆ ಕುಸಿದು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ ಎಂದು ಮೇದಪ್ಪ ಹೇಳಿದ್ದಾರೆ.

ಈ ಹಿನ್ನೆಲೆ ಮಳೆಗಾಲ ಮುಗಿದ ನಂತರ ಸಾಮಗ್ರಿಗಳನ್ನು ಸಾಗಿಸಲು ಗುತ್ತಿಗೆದಾರರು ಮುಂದಾಗಬೇಕು. ಅಧಿಕ ಭಾರದ ವಾಹನಗಳು ರಸ್ತೆಯಲ್ಲಿ ಚಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಎಸ್.ಜಿ. ಮೇದಪ್ಪ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ. ಪ್ರಮುಖರಾದ ನಿಶಾಂತ್, ನಗರಳ್ಳಿ ಕುಶಾಲಪ್ಪ, ಗಣಪತಿ, ಮಧುಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಭಾರೀ ವಾಹನಗಳಿಗೆ ತಡೆಯೊಡ್ಡಿದರು.