ಮಡಿಕೇರಿ, ಜೂ. 17: ಕೊರೊನಾ ಮಹಾಮಾರಿ ಹರಡುವಿಕೆಯನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾಕ್ಸ್‍ವಾದಿ) ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೊನಾ ಹರಡುವಿಕೆ ತಡೆಯುವಲ್ಲಿ ಬಿ.ಜೆ.ಪಿ. ಅಸಡ್ಡೆ ತೋರುತ್ತಿದೆ ಎಂದು ದೂರಿ, ಸರಕಾರದ ವಿರುದ್ಧ ಫೋಷಣೆ ಕೂಗಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ರಾ. ದುರ್ಗಪ್ರಸಾದ್ ಮಾತನಾಡಿ, ಆರಂಭದಲ್ಲಿ ಕೊರೊನಾ ಕಾಯಿಲೆ ಹುಟ್ಟಿದಾಗಲೇ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಸರಕಾರ ನಿದ್ರಾವಸ್ಥೆಯಲ್ಲಿತ್ತು ಎಂದು ದೂರಿದರು. ಕೊರೊನಾ ವಿರುದ್ಧ ಸರಕಾರ ಪಣತೊಟ್ಟು ಸಕಾಲದಲ್ಲಿ ಕ್ರಮ ತೆಗೆದುಕೊಂಡಿದ್ದರೆ ಭಾರತದ ಜನರನ್ನು ಈ ಕಾಯಿಲೆಯಿಂದ ರಕ್ಷಿಸಬಹುದಿತ್ತು ಎಂದು ದುರ್ಗಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರಕಾರದ ಅಸಡ್ಡೆಯಿಂದ ಇದೀಗ ದೇಶದ ಜನರು ತೀವ್ರ ರೀತಿಯ ಸಂಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿದೆ ಎಂದು ದೂರಿದರು. ಕೊರೊನಾ ಸಂಕಷ್ಟದ ನಡುವೆ ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ಕೈಗಾರಿಕೆಗಳು ಮುಚ್ಚುವಂತಾಗಿದೆ. ಕಾರ್ಮಿಕರಿಗೆ ಉದ್ಯೋಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಉಪ ಕಾರ್ಯದರ್ಶಿ ಪಿ.ಆರ್. ಭರತ್, ಖಜಾಂಚಿ ಎ.ಸಿ. ಸಾಬು, ಪದಾಧಿಕಾರಿಗಳಾದ ಎನ್.ಡಿ. ಕುಟ್ಟಪ್ಪ, ಮಹದೇವಾ ವಹಿಸಿದ್ದರು.