ಮಡಿಕೇರಿ, ಜೂ. 17: ವೀರಾಜಪೇಟೆ ವಲಯ ವ್ಯಾಪ್ತಿಯಲ್ಲಿ ಅರಣ್ಯ ಮೊಕದ್ದಮೆಗೆ ಸಂಬಂಧಿಸಿದಂತೆ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ಅರಣ್ಯ ಉತ್ಪನ್ನಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಸ್ವರಾಜ್ ಮಜ್ದಾ ಗೂಡ್ಸ್ ಕ್ಯಾರಿಯರ್ ವಾಹನ (ಕೆಎ-12-8860) ಹಾಗೂ ವಿವಿಧ ಜಾತಿಯ ಮರಗಳ 40 ದಿಮ್ಮಿ ಪ್ಲಸ್ 5.607 ಘ.ಮೀಗಳನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಈ ವಾಹನ ಹಾಗೂ ಸ್ವತ್ತುಗಳ ಬಗ್ಗೆ ಯಾರಿಂದಲೂ ಹಕ್ಕು ಭಾದ್ಯತೆ ಇರುವುದಿಲ್ಲ.

ಆದ್ದರಿಂದ ಈ ವಾಹನಗಳ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನಗಳ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅಹವಾಲುಗಳನ್ನು ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ಈ ಕಚೇರಿಗೆ ಸಲ್ಲಿಸಬೇಕಾಗಿದ್ದು, ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, 1963 ರ ವಿಧಿ 71(ಎ)ಯಿಂದ (ಜಿ) ಪ್ರಕಾರ ಈ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವೀರಾಜಪೇಟೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಜೆ. ರೋಷಿಣಿ ತಿಳಿಸಿದ್ದಾರೆ.

ಅಲ್ಲದೆ, ವೀರಾಜಪೇಟೆ ವ್ಯಾಪ್ತಿಯಲ್ಲಿ ಕಾಡುಕುರಿಯನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾ (ಕೆಎ-12-9175)ನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಈ ವಾಹನದ ಬಗ್ಗೆ ಯಾರಿಂದಲೂ ಹಕ್ಕುಭಾದ್ಯತೆ ಇರುವುದಿಲ್ಲ. ಆದ್ದರಿಂದ ಈ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅಹವಾಲುಗಳನ್ನು ಈ ಕಚೇರಿಗೆ ಸಲ್ಲಿಸಬೇಕಿದ್ದು, ಅಹವಾಲು ಬಾರದಿದ್ದಲ್ಲಿ ಈ ವಾಹನವನ್ನು ಸರ್ಕಾರ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.