ವೀರಾಜಪೇಟೆ, ಜೂ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಿಂದ ಆಯೋಜಿಸಲಾಗಿದ್ದ ಮತ್ಸ್ಯ ಭವನದ 20 ಹಸಿಮೀನು ಮಳಿಗೆಗಳ ಹರಾಜಿನಲ್ಲಿ ಸರಕಾರದ ನಿರೀಕ್ಷಿತ ಬಿಡ್ ಬರಲಿಲ್ಲವೆಂಬ ಕಾರಣಕ್ಕಾಗಿ ಎಲ್ಲಾ ಬಿಡ್‍ಗಳನ್ನು ತಿರಸ್ಕರಿಸ ಲಾಯಿತು. ವೀರಾಜಪೇಟೆಯ ಹಂದಿ ಮಾಂಸದ ಮೂರು ಮಳಿಗೆಗಳು ವಾರ್ಷಿಕವಾಗಿ ರೂ. 2,73,916ಕ್ಕೆ ಹರಾಜಾಗಿದ್ದು, ವಾಹನ ಶುಲ್ಕ ರೂ. 2,20,000 ಹಾಗೂ ಸಂತೆ ಶುಲ್ಕ ರೂ. 2,51,000ಕ್ಕೆ ಹರಾಜಾಗಿ ಪಟ್ಟಣ ಪಂಚಾಯಿತಿಗೆ ಈ ಮೂರು ಬಾಬ್ತುಗಳಿಂದ ಒಟ್ಟು ರೂ. 7,44,916 ಆದಾಯ ಬಂದಿದೆ.
ಸಮುದ್ರದ ಹಸಿಮೀನು ಮಾರಾಟದ ಮಳಿಗೆಗಳ ಹಕ್ಕನ್ನು ಪಡೆಯಲು ಒಟ್ಟು 23 ಮಂದಿ ಇ.ಎಂ.ಡಿ. ರೂ. 1 ಲಕ್ಷ ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೆ 20 ಮಳಿಗೆಗಳನ್ನು ಪ್ರತ್ಯೇಕವಾಗಿ ಹರಾಜು ಮಾಡಿದರೂ ಬಿಡ್‍ಗಾಗಿ ಇ.ಎಂ.ಡಿ. ಪಾವತಿಸಿದರೂ ಹರಾಜಿನಲ್ಲಿ ಯಾರೂ ಭಾಗವಹಿಸಲಿಲ್ಲ.
ಇಲ್ಲಿನ ಪುರಭವನದಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎಲ್.ಎಂ. ನಂದೀಶ್ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ಪಟ್ಟಣ ಪಂಚಾಯಿತಿ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಹರಾಜಿನಲ್ಲಿ ವಾಹನ ಶುಲ್ಕ ವಸೂಲಾತಿಗೆ 11 ಮಂದಿ, ಸಂತೆ
(ಮೊದಲ ಪುಟದಿಂದ) ಶುಲ್ಕಕ್ಕೆ 13 ಮಂದಿ ಬಿಡ್‍ದಾರರು ಭಾಗವಹಿಸಿ ಬಿಡ್‍ನ ಪೂರ್ತಿ ಹಣವನ್ನು ಷರತ್ತಿನಂತೆ ಪಾವತಿಸಿದರು.
ಬೀಗ ಜಡಿಯಲು ನಿರ್ಧಾರ
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮತ್ಸ್ಯ ಭವನದ 20 ಹಸಿ ಮೀನು ಮಳಿಗೆಗಳು ಸರಕಾರದ ನಿರೀಕ್ಷಿತ ಬಿಡ್‍ಗೆ ಹರಾಜಾಗಲಿಲ್ಲ ವೆಂಬ ಕಾರಣಕ್ಕೆ ನಾಳೆಯಿಂದಲೇ ಮತ್ಸ್ಯ ಭವನಕ್ಕೆ ಬೀಗ ಜಡಿಯಲಾಗುವುದು. ಮುಂದೆ ಇ-ಮೇಲ್‍ನಲ್ಲಿ ಹರಾಜು ನಡೆಸ ಲಾಗುವುದು ಎಂದು ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು.
ಬಿಡ್‍ದಾರರ ಆಕ್ಷೇಪಣೆ
ಮತ್ಸ್ಯ ಭವನದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಸಮರ್ಪಕವಾಗಿ ಹಸಿಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮತ್ಯ್ಸ ಭವನದ ಕಾಮಗಾರಿ ಪೂರ್ಣಗೊಂಡಿದೆಯೇ ವಿನ: ಬಿಡ್‍ನಲ್ಲಿ ಮಳಿಗೆಗಳನ್ನು ಪಡೆದ ಮಾರಾಟಗಾರರಿಗೆ ಯಾವುದೇ ಸೌಕರ್ಯಗಳಿಲ್ಲ. ಕೋವಿಡ್‍ನಿಂದಾಗಿ ಕೇರಳದಿಂದ ಸುಮಾರು 256 ಕಿಲೋ ಮೀಟರ್ ಬಳಸಿ ಸಮುದ್ರದ ಹಸಿ ಮೀನನ್ನು ವೀರಾಜಪೇಟೆಗೆ ತಂದು ದುಬಾರಿ ದರದಲ್ಲಿ ಮಾರಾಟ ಮಾಡಬೇಕಿದೆ. ದುಬಾರಿ ಬಿಡ್‍ಗೆ ಮಳಿಗೆಗಳನ್ನು ಪಡೆದು ಹಸಿಮೀನನ್ನು ಗ್ರಾಹಕರಿಗೆ ನ್ಯಾಯಸಮ್ಮತವಾದ ದರಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲವೆಂದು ಬಿಡ್‍ದಾರ ಕೆ.ಎಂ. ಸೋಮಯ್ಯ ತಿಳಿಸಿದರು.
ಕೊರೊನಾ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆ ಮಾಕುಟ್ಟ ಹಾಗೂ ಕುಟ್ಟ ಚೆಕ್ ಪೋಸ್ಟ್‍ಗಳು ತೆರೆಯಲ್ಪಟ್ಟರೆ ಮಾತ್ರ ರಿಯಾಯಿತಿ ದರದಲ್ಲಿ ಹಸಿಮೀನು ಗ್ರಾಹಕರಿಗೆ ಮೀನು ಒದಗಿಸಬಹುದೆಂದು ಸೋಮಯ್ಯ ತಿಳಿಸಿದರು.
ಕಳೆದ 2018-19 ರಲ್ಲಿ ಸಮುದ್ರದ ಹಸಿ ಮೀನಿನಿಂದ ಇಲ್ಲಿನ ಪಟ್ಟಣ ಪಂಚಾಯಿತಿಗೆ ರೂ. 12ಲಕ್ಷಕ್ಕೂ ಅಧಿಕ ಆದಾಯ ಬಂದಿತ್ತು.