ಮಡಿಕೇರಿ, ಜೂ.16 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ನೈಜ ಕೃಷಿಕರಿಗೆ ಮಾರಕವಾಗಿದ್ದು, ಸಾಮಾನ್ಯ ರೈತರು ಬಂಡವಾಳಶಾಹಿಗಳ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಬೇಕಾದÀ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀಣಾಅಚ್ಚಯ್ಯ ಅವರು ಕೃಷಿ ಮತ್ತು ತೋಟಗಾರಿಕೆಯನ್ನೇ ಜೀವಾಳವಾಗಿ ಮಾಡಿಕೊಂಡಿರುವ ಕೊಡಗು ಜಿಲ್ಲೆಯ ಅಸ್ತಿತ್ವಕ್ಕೆ ತಿದ್ದುಪಡಿ ಕಾಯ್ದೆ ದಕ್ಕೆಯಾಗಲಿದೆ. ಜಿಲ್ಲೆಯ ಭೂಮಿ ನಿಯಮ ಮೀರಿ ಮಾರಾಟವಾಗಲಿದೆ ಎಂದರು. ಬಡ ಕೃಷಿಕರ ಭೂಮಿಯ ಮೇಲೆ ಕಂದಾಯ ಸಚಿವರು ಕಣ್ಣು ಹಾಕಿ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ನೈಜ ಕೃಷಿಕರಿಗೆ ಮಾಡುತ್ತಿರುವ ಅನ್ಯಾಯವನ್ನು ಯುವಪೀಳಿಗೆ ಅರಿತುಕೊಳ್ಳಬೇಕು. ತಂದೆ, ತಾಯಿ ಕಷ್ಟಪಟ್ಟು ಮಾಡಿಟ್ಟ ಕೃಷಿಭೂಮಿ ಪರರ ಪಾಲಾಗುವುದನ್ನು ತಡೆಯಲು ಯುವಸಮೂಹ ಹೋರಾಟಕ್ಕೆ ದುಮುಕಬೇಕು ಎಂದು ಮನವಿ ಮಾಡಿದರು.
ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತ ಹೆಚ್ಚಾಗಿ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತ್ವ ಕ್ರಮೇಣವಾಗಿ ಇಲ್ಲವಾಗುತ್ತಾ ಹೋಗುತ್ತದೆ. ರಾಜ್ಯ ಸರ್ಕಾರ
(ಮೊದಲ ಪುಟದಿಂದ) ಮೂಲ ಕೃಷಿ ಕಸುಬನ್ನೇ ಹೊಂದಿರುವ ಬಡ ರೈತಾಪಿ ವರ್ಗದ ಹಿತ ಕಾಪಾಡಲು ಈ ಹಿಂದಿನ ಕಾಯ್ದೆಯನ್ನು ಮುಂದುವರೆಸಬೇಕು ಮತ್ತು ತಿದ್ದುಪಡಿಯನ್ನು ರದ್ದುಪಡಿಸಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು. ರೈತರ ಹಿತವನ್ನು ಕಡೆಗಣಿಸಿ ಕಾಯ್ದೆ ಜಾರಿಗೆ ಮುಂದಾದಲ್ಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೀತಿಯ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ
ಕೋಟಿ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಲಾಕ್ಡೌನ್ ಸಡಿಲಿಕೆಯಾದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರ ಕೊರತೆ
ಸರ್ಕಾರದ ಗೊಂದಲಮಯ ನಿರ್ಧಾರಗಳಿಂದಾಗಿ ಜಿಲ್ಲೆಯಲ್ಲಿದ್ದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರುಗಳು ಜಿಲ್ಲೆಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಕೊಡಗಿನಲ್ಲಿ ಕಾರ್ಮಿಕರ ಕೊರತೆ ಎದುರಾಗಿದ್ದು, ಕಟ್ಟಡ ಕಾಮಗಾರಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಟೀಕಿಸಿದರು.
ವೀರಾಜಪೇಟೆಯ ತೋರ ಗ್ರಾಮ, ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ವಿವಿಧೆಡೆ ಅನೇಕರು ಮಳೆಹಾನಿ ಸಂಕಷ್ಟವನ್ನು ಎದುರಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಇವರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅಂದು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಸುಮಾರು 800 ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ 450ಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ನೂತನ ಮನೆ ಸಿಕ್ಕಿದ್ದರೂ ಕೆಲವು ಫಲಾನುಭವಿಗಳು ಅಪಾಯದಂಚಿನಲ್ಲಿರುವ ತಮ್ಮ ಹಳೆಯ ಮನೆಗಳಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ. ಈ ರೀತಿಯ ಬೆಳವಣಿಗೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡದೆ ಫಲಾನುಭವಿಗಳು ತಮಗೆ ದೊರೆತ ನೂತನ ಮನೆಗಳಲ್ಲೇ ವಾಸಿಸುವಂತೆ ಸೂಚಿಸಬೇಕು. ಈ ಬಾರಿ ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಇಲ್ಲಿಯವರೆಗೆ ರೈತರು, ಬೆಳೆಗಾರರು ಹಾಗೂ ಕಾರ್ಮಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸಿಲ್ಲ. ವನ್ಯಜೀವಿ ದಾಳಿ ಕುರಿತು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ರೈತರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ತಾ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಹಾಗೂ ಪ್ರಮುಖರಾದ ವಸಂತ ಉಪಸ್ಥಿತರಿದ್ದರು.