ಚೆಟ್ಟಳ್ಳಿ, ಜೂ. 16: ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು, ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕರೆ ಗ್ರಾಮಕ್ಕೆ ತೆರಳುವ ಗುಂಡಿಬಿದ್ದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಕಾಡಾನೆಗಳ ಕಾಟವೂ ಅಧಿಕವಾಗಿದೆ. ಸಾರ್ವಜನಿಕರು ಭಯಪಡುವಂತಾಗಿದೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು ಗುಂಡಿ ಬಿದ್ದ ರಸ್ತೆಯಲ್ಲಿ ನಡೆದು ಸಾಗಲು ಸಾಧ್ಯವಾಗದೆ ಶಾಲಾ ಕಾಲೇಜಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾ.ಪಂ.ಯಿಂದ ಅನುಮತಿ ಪಡೆದ ಮರಳು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಗಳು ರಸ್ತೆ ಸರಿಪಡಿಸದಿದ್ದಲ್ಲಿ ಮರಳು ವಾಹನಗಳನ್ನು ತಡೆಗಟ್ಟಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ .
ಈ ಸಂದರ್ಭ ಗ್ರಾಮದ ನಿವಾಸಿಗಳಾದ ಪ್ರಕಾಶ್, ರಘು ಕಾರ್ಯಪ್ಪ, ಅರುಣ್, ಗಣೇಶ, ರಾಜನ್, ಮಣಿ, ಸದಿ, ರಾಜೇಶ್, ವಿಜಯ್, ಸುನೀಲ್, ಸುಬ್ರು, ಸಾದಿಕ್, ಪದ್ಮನಾಭನ್, ಮಜೀದ್, ಪ್ರವೀಣ್, ನವೀನ್, ರವಿ, ಕಿಶೋರ್, ಅಂತೋಣಿ, ಸಂತೋಷ್, ಲತೇಶ್, ಶಿವರಾಜ್ ಮೋಹನ್ ಸೇರಿದಂತೆ ಮತ್ತಿತರರು ಇದ್ದರು.