ಗೋಣಿಕೊಪ್ಪಲು, ಜೂ.16: ಅದೊಂದು ಸುಂದರ ಕುಟುಂಬ ತಂದೆಯ ಹೆಚ್ಚಿನ ಜವಾಬ್ದಾರಿಯನ್ನು ಸಣ್ಣ ವಯಸ್ಸಿನಲ್ಲಿಯೇ ನಿಭಾಯಿಸುವ ಮೂಲಕ ತಂದೆ, ತಾಯಿಯ ಪ್ರೀತಿಗೆ ಪಾತ್ರನಾಗಿದ್ದ. ಕುಟುಂಬದ ಸಂಪೂರ್ಣ ವ್ಯವಹಾರವನ್ನು ಮಗನೇ ನಿಭಾಯಿಸುತ್ತಿದ್ದ ಕಾರಣ ಹೆತ್ತವರು ಅಷ್ಟೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ವಯಸ್ಸಿಗೆ ಬಂದ ಮಗನಿಗೆ ಕೆಲವೇ ವರ್ಷಗಳಲ್ಲಿ ವಿವಾಹ ಮುಗಿಸಿ ಇನ್ನಷ್ಟು ಜವಾಬ್ದಾರಿಯನ್ನು ಈತನಿಗೆ ವಹಿಸುವ ಆಲೋಚನೆಯಲ್ಲಿದ್ದ ಆ ಕುಟುಂಬಕ್ಕೆ ಅಂದು ಬಂದ ಸಿಡಿಲಬ್ಬರದ ಸುದ್ದಿ ಕೇಳಿ ಇನ್ನೂ ಕೂಡ ಆ ದುಃಖದಿಂದ ಹೊರ ಬಂದಿಲ್ಲ.

ಮೂಲತಃ ಅಮ್ಮತ್ತಿ ಗ್ರಾಮದಲ್ಲಿ ನೆಲೆಸಿರುವ ಮರ ವ್ಯಾಪಾರಿ ಟಾಮಿ ರಜಾರಿಯೋ ಎಂಬುವರಿಗೆ ಎರಡು ಮುದ್ದಾದ ಮಕ್ಕಳು ಹಿರಿಯ ಮಗ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರೆ ಮಗಳು ಇನ್ನೂ ಕೂಡ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾಳೆ. ಆರ್ಥಿಕವಾಗಿ ಸಬಲರಾಗಿದ್ದ ಈ ಕುಟುಂಬ ಗ್ರಾಮದ ಎಲ್ಲಾ ಸಮುದಾಯದವರೊಂದಿಗೆ ಅನ್ಯೋನ್ಯವಾಗಿದ್ದರು.ಇವರ ಮಗ ದಿಲ್ಸನ್ ರಜಾರಿಯೋ ಕೂಡ ಅಕ್ಕಪಕ್ಕದ ಹಾಗೂ ಗ್ರಾಮದವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಉತ್ತಮ ಹೆಸರುಗಳಿಸಿದ್ದ. ಆದರೆ ಬಾಳಿ ಬದುಕಬೇಕಾಗಿದ್ದ ದಿಲ್ಸನ್ ರಜಾರಿಯೋ ಎಂಬ ಯುವಕ ಏ.12 ರಂದು ಅಪಘಾತವೊಂದರಲ್ಲಿ ಮೃತಪಟ್ಟಿದ್ದ. ಮನೆಯ ಅನತಿ ದೂರದಲ್ಲಿಯೇ ನಡೆದ ಈ ಅಪಘಾತವು ತೀರ ಅನುಮಾನಕ್ಕೆ ಎಡೆಯಾಗಿದ್ದು ಇದೀಗ ಗ್ರಾಮದಲ್ಲಿ ಅಪಘಾತದ ವಿಷಯ ದೊಡ್ಡ ಸದ್ದು ಮಾಡುತ್ತಿದೆ.

ವಿಶ್ರಾಂತಿ ಪಡೆದು ಮನೆಯಲ್ಲಿಯೇ ಇದ್ದ ದಿಲ್ಸನ್ ರಜಾರಿಯೋ ಎಂಬ ಯುವಕ ಏ.12ರ ಸಂಜೆ 4 ಗಂಟೆ ಸುಮಾರಿಗೆ ಸ್ನೇಹಿತರು ಮಾಡಿರುವ ಮೊಬೈಲ್ ಕರೆ ಹಿನ್ನೆಲೆಯಲ್ಲಿ ಮನೆಯಿಂದ ಹೊರಹೋಗಿದ್ದ. ತಾನು ಓಡಿಸುತ್ತಿದ್ದ ಜೀಪಿನೊಂದಿಗೆ ತೆರಳಿದ್ದ ಮಗ ಸಂಜೆಯಾದರೂ ಮನೆಯತ್ತ ಆಗಮಿಸದಿರುವುದರಿಂದ ಮನೆಯ ವರು ಗಾಬರಿಯಲ್ಲಿದ್ದರು. ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ ರಾದರೂ ಸಂಪರ್ಕ ಸಿಕ್ಕಿರಲಿಲ್ಲ.

ಮನೆಯ ಒಂದು ಕಿ.ಮೀ.ದೂರದ ಹಂಚಿಕಾಡು ಎಂಬಲ್ಲಿ ಸ್ನೇಹಿತರೊಂದಿಗೆ ಕೆಲ ಸಮಯ ಕಳೆಯಲು ತೆರಳಿದ್ದ ದಿಲ್ಸನ್ ರಜಾರಿಯೋ ಎಂಬ ಯುವಕ ತನ್ನ ಜೀಪಿನ ಅಡಿಗೆ ಸಿಕ್ಕಿಕೊಂಡು ಮೃತಪಟ್ಟಿದ್ದಾನೆ ಎಂಬ ಸುದ್ದಿಯೂ ಗ್ರಾಮದ ಜನತೆಗೆ 7 ಗಂಟೆ ಸುಮಾರಿಗೆ ತಲುಪಿತ್ತು. ಆದರೆ 1.ಕಿ.ಮೀ. ದೂರದಲ್ಲಿರುವ ದಿಲ್ಸನ್ ರಜಾರಿಯೋ ಮನೆಯವರಿಗೆ ಮಾತ್ರ ಈ ಸುದ್ದಿ ತಿಳಿದಿದ್ದು ಸಂಜೆ 8 ಗಂಟೆಗೆ.! ಇದರಿಂದಲೇ ಈ ಅಪಘಾತವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈತನೊಂದಿಗೆ ತೆರಳಿದ ಯುವಕರಿಗೆ ಸ್ನೇಹಿತ ದಿಲ್ಸನ್ ರಜಾರಿಯೋ ಮನೆಯವರ ಪರಿಚಯವಿದ್ದರೂ ಯಾರೂ ಕೂಡ ಮೊಬೈಲ್ ಮೂಲಕ ಸುದ್ದಿ ತಿಳಿಸಿರಲಿಲ್ಲ. ಅಲ್ಲದೆ ಒಂದು ಕಿ.ಮೀ. ದೂರದಲ್ಲಿ ಘಟನೆ ನಡೆದಿದ್ದರೂ ತಿಳಿಸುವ ಪ್ರಯತ್ನ ಮಾಡಲೇ ಇಲ್ಲ.

ಸಮಯ ಕಳೆಯಲು ಸಂಜೆಯ ವೇಳೆಯಲ್ಲಿ ಸ್ನೇಹಿತರೊಂದಿಗೆ ತೆರಳಿದ ಸಂದರ್ಭ ದಿಲ್ಸನ್ ರಜಾರಿಯೋ ಜೀಪಿನಡಿಯಲ್ಲಿ ಸಿಕ್ಕಿಕೊಂಡು ನರಳುತ್ತಿದ್ದರೆ, ಇತ್ತ ಅಪಘಾತ ಸ್ಥಳದಲ್ಲಿ 5 ಜನ ಸ್ನೇಹಿತರಿದ್ದರೂ ಯಾರೊಬ್ಬರಿಗೂ ಗಂಭೀರ ಗಾಯಗಳಾಗಿರಲಿಲ್ಲ.! ತೆರಚಿದ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದವು.

ಜೀಪಿನ ಚಕ್ರದ ಅಡಿಯಲ್ಲಿ ಸಿಲುಕಿಕೊಂಡಿದ್ದ ದಿಲ್ಸನ್ ರಜಾರಿಯೋ ಎಂಬ ಸ್ನೇಹಿತನನ್ನು ಐವರು ಸೇರಿ ಜೀಪನ್ನು ಎತ್ತಿ ದಿಲ್ಸನ್ ರಜಾರಿಯೋ ಎಂಬುವವನನ್ನು ಹೊರ ತರುವ ಅವಕಾಶ ಇದ್ದರೂ ಈ ಕೆಲಸ ಮಾಡಲು ಯುವಕರು ಪ್ರಯತ್ನವೇ ಮಾಡದಿರುವುದು ಅನುಮಾನಗಳಿಗೆ ಪುಷ್ಠಿ ನೀಡುವಂತಾಗಿದೆ. ಸಹಜವಾಗಿ ಯಾವುದೇ ಅಪಘಾತ ಸಂಭವಿಸಿದರೂ ಸ್ಥಳದಲ್ಲಿ ವ್ಯಕ್ತಿಯನ್ನು ಉಳಿಸುವ ಪ್ರಯತ್ನ ಸಾರ್ವಜನಿಕರು ನಡೆಸುತ್ತಾರೆ ಹಾಗೂ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಪ್ರಯತ್ನಕ್ಕೆ ಕೈ ಜೋಡಿಸುತ್ತಾರೆ. ಆದರೆ ಆತ್ಮೀಯ ಸ್ನೇಹಿತರು ಸ್ಥಳದಲ್ಲಿಯೇ ಇದ್ದು ಜೀಪನ್ನು ಎತ್ತುವ ಶಕ್ತಿ ಇದ್ದರೂ ಈ ಕೆಲಸ ಮಾಡದಿರುವುದು ತೀವ್ರ ಅನುಮಾನ ಮೂಡಿಸಿದೆ.

ಸುದ್ದಿ ತಿಳಿದ ಮನೆಯವರು ಘಟನಾ ಸ್ಥಳಕ್ಕೆ ತೆರಳಿ ಜೀಪಿನಡಿಯಲ್ಲಿ ಸಿಲುಕಿದ್ದ ಮಗನನ್ನು ಎತ್ತುವಾಗ ಯುವಕನ ಉಸಿರಾಟ ನಿಂತಿರಲಿಲ್ಲ. ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಕೆಲ ಘಂಟೆಯ ನಂತರ ಯುವಕ ಕೊನೆಯುಸಿರೆಳೆದಿದ್ದ. ಈ ಸಂದರ್ಭ ಈತನೊಂದಿಗೆ ಇದ್ದ ಯುವಕರು ಮಾತ್ರ ಸ್ಥಳದಲ್ಲಿರದೆ ಗಾಯದ ನೆಪದಲ್ಲಿ ಸಮೀಪದ ಆಸ್ಪತ್ರೆಯಲ್ಲಿ ತೋರಿಸಿ ನಂತರ ಈ ಆಸ್ಪತ್ರೆಗೆ ವಾಹನವನ್ನು ಕರೆಸಿ ಅಲ್ಲಿಂದ ಗಾಯದ ನೆಪದಲ್ಲಿ ಹೊರ ಜಿಲ್ಲೆಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದರು.!

ಅಪಘಾತ ಸಂಭವಿಸಿದ ತಕ್ಷಣ ಜೀಪನ್ನು ಎತ್ತಿ ಯುವಕನನ್ನು ಪ್ರಾಣಾಪಾಯದಿಂದ ಪಾರುಮಾಡುವ ಅವಕಾಶವಿದ್ದರೂ ಈ ಅವಕಾಶವನ್ನು ಕೈ ಚೆಲ್ಲಿ ಯುವಕರು ಸುಮ್ಮನಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹೆಚ್ಚು ಮಾಡಿದೆ. ಅಲ್ಲದೆ ಸಣ್ಣ ಪುಟ್ಟ ತೆರಚಿದ ಗಾಯಗಳಾಗಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿದ್ದವರು ಗ್ರಾಮದ ಜನತೆ ಆಸ್ಪತ್ರೆಗೆ ಆಗಮಿಸುತ್ತಿ ದ್ದಂತೆಯೇ ಗಾಯದ ನೆಪದಲ್ಲಿ ಸ್ಥಳೀಯ ಆಸ್ಪತ್ರೆಯನ್ನು ಬಿಟ್ಟು ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳುವ ಅವಕಾಶ ಏನಿತ್ತು.? ಎಂದು ಗ್ರಾಮದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಆತ್ಮೀಯ ಸ್ನೇಹಿತ ಮೃತಪಟ್ಟ ವಿಷಯದ ಅರಿವಿದ್ದರೂ ಆತನ ಅಂತ್ಯ ಸಂಸ್ಕಾರದಲ್ಲಿ ಭಾಗಿಗಳಾಗದೆ ದೂರ ಉಳಿದಿರುವುದು ಕೂಡ ಇನ್ನಷ್ಟು ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ಗಮನ ಹರಿಸಿದ್ದಲ್ಲಿ ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ತೆರೆ ಎಳೆಯಬಹುದಾಗಿದೆ.

-ಹೆಚ್.ಕೆ.ಜಗದೀಶ್