ಮಡಿಕೇರಿ, ಜೂ. 16: ಗಾಯಗೊಂಡು ರಸ್ತೆ ಬದಿ ನರಳಾಡುತ್ತಿದ್ದ ಗೂಳಿಯೊಂದಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಜೂನಿಯರ್ ಕಾಲೇಜು ಬಳಿ ಗೂಳಿಯೊಂದು ಕಾಲಿಗೆ ಗಾಯಗೊಂಡು ನರಳಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಂಚಾರಿ ದಳದ ನಿರೀಕ್ಷಕ ಬೆಳ್ಯಪ್ಪ, ಸಿಬ್ಬಂದಿಗಳು ಪರಿಶೀಲಿಸಿ, ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ಅಲೆದಾಡುತ್ತಾ, ಸಿಕ್ಕಿದನ್ನು ತಿನ್ನುತ್ತಾ ಸಾಗುತ್ತಿದ್ದ ಗೂಳಿಯ ಕಾಲಿಗೆ ಯಾರೋ ದುಷ್ಕರ್ಮಿಗಳು ಕಡಿದು ಗಾಯಗೊಳಿಸಿದಂತೆ ಕಾಣುತ್ತಿದೆ. ಸದ್ಯ ನಡೆಯಲಾಗದ ಗೂಳಿ ಜೂನಿಯರ್ ಕಾಲೇಜು ಬಳಿಯ ಜ. ತಿಮ್ಮಯ್ಯ ಪ್ಲೇ ಹೋಂ ಪಕ್ಕದಲ್ಲೇ ರಸ್ತೆ ಬದಿಯಲ್ಲಿ ಮಲಗಿದೆ. - ಲಕ್ಷ್ಮೀಶ್