ಮಡಿಕೇರಿ, ಜೂ. 16: ಕೊಡಗು ಜಿಲ್ಲೆಯಲ್ಲಿ ತಾ. 18 ರಂದು ನಡೆಯುವ 2020ರ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜು, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವೀರಾಜಪೇಟೆ, ಮಡಿಕೇರಿ, ಕುಶಾಲನಗರ, ನೆಲ್ಲಿಹುದಿಕೇರಿ ಮತ್ತು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೂರ್ನಾಡು ಪದವಿ ಪೂರ್ವ ಕಾಲೇಜು, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಶ್ರೀಮಂಗಲ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿರ್ಬಂಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಈ ಆದೇಶವು ಪರೀಕ್ಷಾ ದಿನಗಳಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಪರೀಕ್ಷಾ ಕೇಂದ್ರದೊಳಗೆ ಮುಖ್ಯ ಅಧೀಕ್ಷಕರು ಸಾಮಾನ್ಯ ಮೊಬೈಲ್ ಮಾತ್ರ ಇರಿಸಿಕೊಳ್ಳಬಹುದಾಗಿದ್ದು, ಉಳಿದಂತೆ ಎಲ್ಲಾ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಸ್ಮಾರ್ಟ್ ವಾಚ್ ಮುಂತಾದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ.

ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡುಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಮತ್ತು ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.