ಸೋಮವಾರಪೇಟೆ, ಜೂ. 15: ಹಸಿಮೆಣಸಿನ ಕಾಯಿಯನ್ನು ಬೆಳೆದು ಮಾರಾಟಕ್ಕೆ ತಂದಿದ್ದ ಶಾಂತಳ್ಳಿ ಹೋಬಳಿಯ ಕೃಷಿಕರೋರ್ವರು, ಮೆಣಸಿನ ಕಾಯಿಗೆ ಬೇಡಿಕೆ ಇಲ್ಲದ್ದರಿಂದ ಹತಾಶೆಗೊಂಡು ಎರಡು ಚೀಲದಷ್ಟು ಹಸಿಮೆಣಸನ್ನು ಚರಂಡಿಗೆ ಸುರಿದು ಆಕ್ರೋಶ ಹೊರಹಾಕಿದರು.

ಕಷ್ಟಪಟ್ಟು ಹಸಿಮೆಣಸನ್ನು ಬೆಳೆದಿದ್ದು, ಇಂದು ಮಾರಾಟಕ್ಕೆಂದು ಸಂತೆಗೆ ತರಲಾಗಿತ್ತು. ಆದರೆ ಮೆಣಸಿನಕಾಯಿಯನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲವರು ಅತೀ ಕಡಿಮೆ ಹಣಕ್ಕೆ ಕೇಳುತ್ತಿದ್ದಾರೆ. ಗದ್ದೆಯಿಂದ ಪಟ್ಟಣಕ್ಕೆ ತಂದ ಬಾಡಿಗೆ ಹಣವೂ ದಕ್ಕುತ್ತಿಲ್ಲ. ಹೀಗಾಗಿ ಮೆಣಸಿನ ಕಾಯಿಯನ್ನು ಚರಂಡಿಗೆ ಸುರಿದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚರಂಡಿಗೆ ಹಸಿಮೆಣಸಿನ ಕಾಯಿಯನ್ನು ಸುರಿದ ಕೆಲ ಗಂಟೆಗಳಲ್ಲೇ ಸಂತೆಗೆ ಆಗಮಿಸಿದ್ದ ಕೆಲ ಸಾರ್ವಜನಿಕರು, ಮೆಣಸಿನಕಾಯಿಯನ್ನು ತಮ್ಮ ಬ್ಯಾಗ್‍ಗಳಿಗೆ ತುಂಬಿಸಿಕೊಂಡರು!