ವೀರಾಜಪೇಟೆ, ಜೂ.14: ಭಾರತೀಯ ಭೂಸೇನಾ ನಿವೃತ್ತ ಅಧಿಕಾರಿ ಲೆ:ಜ: ಕೋದಂಡ ನಂಜಪ್ಪ ಸೋಮಣ್ಣ (93) ಅವರು ಇಲ್ಲಿನ ಪಂಜರ್‍ಪೇಟೆಯ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಅಂತ್ಯಕ್ರಿಯೆ ಕೊಡವ ವಿಧಿ ವಿಧಾನದಂತೆ ಇಂದು 12-20ಕ್ಕೆ ಅವರ ಲಕ್ಷ್ಮಿ ನಿವಾಸ ಮನೆಯ ಹಿಂದಿನ ಕಾಫಿತೋಟದಲ್ಲಿ ಸೇನಾ ಗೌರವದೊಂದಿಗೆ ನಡೆಯಿತು. ಜಿಲ್ಲೆಯ ನಿವೃತ್ತ ಸೇನಾ ಅಧಿಕಾರಿಗಳು, ಹಿತೈಷಿಗಳು ಅಭಿಮಾನಿಗಳ ಸಮ್ಮುಖದಲ್ಲಿ ಮಳೆಯ ನಡುವೆಯೂ ಅವರ ಮಗಳು ಶರನ್ ಪೆಮ್ಮಯ್ಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದೇ ಸಂದರ್ಭ ಸೋಮಣ್ಣ ಅವರ ಪತ್ನಿ ರೇಣು ಹಾಗೂ ಮೊಮ್ಮಕ್ಕಳು ಹಾಜರಿದ್ದರು. ಮಗ ಡಾ: ನಿವೇದ್ ಅಮೇರಿಕದಲ್ಲಿ ವೈದ್ಯ ವೃತ್ತಿಯಲ್ಲಿದ್ದು, ಕೊರೊನ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದಾಗಿರುವುದರಿಂದ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಿಲ್ಲ ಎಂದು ಕುಟುಂಬದವರು ತಿಳಿಸಿದರು.

ಸೋಮಣ್ಣ ಅವರ ಪಾರ್ಥೀವ ಶರೀರವನ್ನು ಮನೆಯ ಮುಂದಿನ ಅಂಗಳದಲ್ಲಿರಿಸಿದ ನಂತರ ಬೆಳಿಗ್ಗೆ

11.50ಕ್ಕೆ ಬೆಂಗಳೂರಿನಿಂದ ಬಂದಿದ್ದ ಸೇನೆಯ ಎಂ.ಇ.ಜಿ. ತಂಡದ ಮುಖ್ಯಸ್ಥ ಮೇಜರ್ ಅರ್ನಲ್ ಗುಪ್ತ ಹಾಗೂ ಪ್ಯಾರಾ ಮಿಲಿಟರಿಯ ಪಾಂಚಾಲ್ ಗುಪ್ತ ನೇತೃತ್ವದಲ್ಲಿ ಗೌರವ ಸಲ್ಲಿಸಲಾಯಿತು.

ಲಕ್ಷ್ಮಿ ನಿವಾಸದ ಮುಂದಿನ ಆವರಣದಲ್ಲಿರಿಸಿದ್ದ ಸೋಮಣ್ಣ ಅವರ ಪಾರ್ಥೀವ ಶರೀರಕ್ಕೆ ಇಂದು ಬೆಳಗ್ಗಿನಿಂದಲೇ ಕೊಡಗಿನ ವಾಯು ದಳ, ಭೂ ದಳ ಹಾಗೂ ನೌಕಾ ದಳದ ನಿವೃತ್ತ ಅಧಿಕಾರಿಗಳು ಬಂದು ಪುಷ್ಪಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು. ವೀರಾಜಪೇಟೆ ಪಟ್ಟಣದ ಸುತ್ತಮುತ್ತಲಿನ ಅಭಿಮಾನಿಗಳು, ಹಿತೈಷಿಗಳು ನಿನ್ನೆ ಸಂಜೆಯಿಂದಲೇ ಪಾರ್ಥೀವ ಶರೀರದ ದರ್ಶನ ಪಡೆದರು.

ತಾಲೂಕು ಆಡಳಿತದ ಪರವಾಗಿ ಶಿರಸ್ತೇದಾರ್ ಎಚ್.ಕೆ. ಪೊನ್ನು, ಕಂದಾಯ ಅಧಿಕಾರಿಗಳು, ಕಾವೇರಿ ಸೇನೆಯ ರವಿ ಚಂಗಪ್ಪ, ಕೋಲತಂಡ ರಘು ಮಾಚಯ್ಯ, ಎ.ಐ.ಸಿ.ಸಿ. ವಕ್ತಾರ ಬ್ರಿಜೇಶ್ ಕಾಳಪ್ಪ, ಟಿ.ಪಿ.ರಮೇಶ್, ಪಂಜರ್‍ಪೇಟೆ ಕೊಡವಕೇರಿಯ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಟ್ಟಣ ಪಂಚಾಯಿತಿ ಅಭಿಯಂತರ ಎಂ.ಪಿ. ಹೇಮ್‍ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಮಡಿಕೇರಿಯಲ್ಲಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಪುಷ್ಪಗುಚ್ಚದೊಂದಿಗೆ ನಮನ ಸಲ್ಲಿಸಿದರು. ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್ ಬೆಳಿಗ್ಗೆ ಭೇಟಿ ನೀಡಿದ್ದರು.

ನಿವೃತ್ತ ಲೆ:ಜ: ಸೋಮಣ್ಣ ಅವರು ಸೇವೆಯಲ್ಲಿದ್ದಾಗ ಅಮೃತಸರದ ಗೋಲ್ಡನ್ ಟೆಂಪಲ್‍ನಲ್ಲಿ ಅಡಗಿದ್ದ ಉಗ್ರರ ಮೇಲೆ ಕೈಗೊಂಡ ಬ್ಲೂ ಸ್ಟಾರ್ ಆಪರೇಶನ್‍ನ್ನು ನಿವೃತ್ತ ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರಲ್ಲದೆ ವೀರಾಜಪೇಟೆಗೆ ಬಂದು ನೆಲೆಸಿದಾಗಲೂ ಅವರಿಗೆ ಜೀವ ಭಯವಿದ್ದುದರಿಂದ ಎರಡು ವರ್ಷಗಳ ಕಾಲ ಪೊಲೀಸ್ ಭದ್ರತೆ ಒದಗಿಸಿದ್ದನ್ನು ನೆನಪಿಸಲಾಯಿತು.

ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಇಲಾಖೆಯ ವರಿಷ್ಠರು ಗೈರು ಹಾಜರಾಗಿದ್ದರು.