ನಟ ಸುಶಾಂತ್ ಆತ್ಮಹತ್ಯೆಗೆ ಶರಣು

ನವದೆಹಲಿ, ಜೂ. 14: ಎಂ.ಎಸ್. ಧೋನಿ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ಭರವಸೆ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರು ಮೃತಪಟ್ಟ ನಾಲ್ಕು ದಿನಗಳಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾ. 10 ರಂದು ದಿಶಾ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ದಿಶಾ ಸಾವಿಗೆ ಸುಶಾಂತ್ ಮರುಕಪಟ್ಟಿದ್ದರು. ಇನ್ನು ಇಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ರಿ ರಿಸ್ತಾ ಧಾರಾವಾಹಿ ಮೂಲಕ ಸುಶಾಂತ್ ಮನೆ ಮಾತಾಗಿದ್ದರು. ನಂತರ ಬೆಳ್ಳಿ ಪರದೆಯಲ್ಲಿ ಮಿಂಚಿದ್ದರು. ಕೈ ಪೋ ಚೇ, ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ರಾಬ್ತಾ, ವೆಲ್ ಕಮ್ ನ್ಯೂಯಾರ್ಕ್, ಎಂಎಸ್ ಧೋನಿ, ಕೇದಾರನಾಥ್ ಸೇರಿದಂತೆ 11 ಚಿತ್ರಗಳಲ್ಲಿ ಸುಶಾಂತ್ ನಟಿಸಿದ್ದರು.

ಮೂವರು ನ್ಯಾಯಾಧೀಶರಿಗೆ ಕೊರೊನಾ

ಚೆನ್ನೈ, ಜೂ. 14: ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ನ್ಯಾಯಾಧೀಶರಿಗೂ ಕಂಟಕವಾಗಿ ಕಾಡುತ್ತಿದೆ. ಮದ್ರಾಸ್ ಹೈಕೋರ್ಟ್ ಕ್ಯಾಂಪಸ್ ನಲ್ಲಿರುವ ಅಧೀನ ನ್ಯಾಯಾಲಯಗಳ ಮೂವರು ನ್ಯಾಯಾಧೀಶರಿಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಮೂವರು ನ್ಯಾಯಾಧೀಶರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧೀನ ನ್ಯಾಯಾಲಯಗಳ ಕೆಲವು ಸಿಬ್ಬಂದಿಗೂ ಸಹ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಎಷ್ಟು ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಪಾಕ್ ದಾಳಿಗೆ ಸೈನಿಕ ಹುತಾತ್ಮ

ಪೊಂಛ್, ಜೂ. 14: ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಪಾಕಿಸ್ತಾನ ಸೇನೆ ನಡೆಸಿದ ಗುಂಡು ಹಾಗೂ ಶೆಲ್ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಂಛ್ ಮತ್ತು ರಜೌರಿ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಪಾಕಿಸ್ತಾನ ನಡೆಸಿದ ಗುಂಡು ಹಾಗೂ ಶೆಲ್ ದಾಳಿಯಲ್ಲಿ ಮೃತಪಟ್ಟ ಸೈನಿಕರಲ್ಲಿ ಇವರು ಮೂರನೇಯವರಾಗಿದ್ದಾರೆ. ಷಹಪುರ್ - ಕರ್ನಿ ಸೆಕ್ಟರ್‍ನ ಗಡಿಯುದ್ದಕ್ಕೂ ಶನಿವಾರ ರಾತ್ರಿ ಪಾಕಿಸ್ತಾನ ಸೈನಿಕರು ಗುಂಡು ಹಾಗೂ ಶೆಲ್ ದಾಳಿ ನಡೆಸಿದ್ದು, ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಾಕಿಸ್ತಾನ ಸೈನಿಕರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮೂವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಗಾಯಾಳುಗಳ ಪೈಕಿ ಒಬ್ಬರು ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆ

ಬೆಂಗಳೂರು, ಜೂ. 14: ಕರ್ನಾಟಕದಲ್ಲಿ ಇಂದು ಹೊಸದಾಗಿ 176 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಇಂದು 176 ಪ್ರಕರಣ ಪತ್ತೆಯಾಗಿದೆ. ಇನ್ನು 5 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 7000 ಪ್ರಕರಣಗಳ ಪೈಕಿ 3,955 ಮಂದಿ ಗುಣಮುಖರಾಗಿದ್ದಾರೆ. ಇನ್ನು 2,956 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನ್ ಕಿ ಬಾತ್‍ಗೆ ವಿಷಯಬೇಕು

ನವದೆಹಲಿ, ಜೂ. 14: ತಮ್ಮ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್‍ನಲ್ಲಿ ಮಾತನಾಡಲು ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ. ಈ ತಿಂಗಳ ಮನ್ ಕಿ ಬಾತ್ ತಾ. 28 ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಇನ್ನು ಎರಡು ವಾರ ಬಾಕಿ ಇರುವಾಗಲೇ ನಿಮ್ಮ ಆಲೋಚನೆಗಳು, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ಹೆಚ್ಚು ವಿಷಯಗಳ ಬಗ್ಗೆ ಮಾತನಾಡಲು ಕಮೆಂಟ್, ಫೋನ್ ಕಾಲ್‍ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕೋವಿಡ್-19 ಜೊತೆಗೆ ಸಾಕಷ್ಟು ಇನ್ನೂ ಹಲವು ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಧಾರ್ಮಿಕ ನಿಂದನೆ : ನಾಲ್ವರ ಬಂಧನ

ಬಂಟ್ವಾಳ, ಜೂ. 14: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಟ್ವಾಳ ಗ್ರಾಮೀಣ ಠಾಣೆ ಪೊಲೀಸ್ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದಾರೆ. ಸಜಿಪನಡು ನಿವಾಸಿಗಳಾದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20) ಮತ್ತು ಮೊಹಮ್ಮದ್ ಅರ್ಫಾಜ್ (20) ಬಂಧಿತರು. ಹಿಂದೂ ಸ್ಮಶಾನವೊಂದರಲ್ಲಿ ಶಿವನ ವಿಗ್ರಹದ ಸುತ್ತಲೂ ಬೂಟುಗಳನ್ನು ಧರಿಸಿ ಅಸಭ್ಯವಾಗಿ ನೃತ್ಯ ಮಾಡಿದ್ದ ಇವರು ತಮ್ಮ ಈ ನೃತ್ಯವನ್ನು ಟಿಕ್ ಟಾಕ್ ವೀಡಿಯೋ ಮಾಡಿದ್ದಾರೆ ಎಂದು ವರದಿಯಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಅವರು ಅಕ್ರಮವಾಗಿ ಕಾಂಚಿನಡ್ಕ ಪಡವ, ಶಜಿಪನಾಡಿನ ಶವಾಗಾರಕ್ಕೆ ಪ್ರವೇಶಿಸಿ, ಬೂಟುಗಳನ್ನು ಧರಿಸಿದಂತೆಯೇ ಶಿವನ ವಿಗ್ರಹದ ಬಳಿ ಕುಳಿತು ಅದರ ಸುತ್ತಲೂ ನರ್ತಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸೈನಿಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ, ಜೂ. 14: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಸೈನಿಕನೋರ್ವ ಉತ್ತರ ಪ್ರದೇಶದ ಮಥುರಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಸೈನಿಕನನ್ನು ಬರಿಯಾ ನಿವಾಸಿ ಸಂದೇಶ್ ಶೆಟ್ಟಿ (34) ಎಂದು ಗುರುತಿಸಲಾಗಿದೆ. ರಜೆಯಿಂದ ಹಿಂದಿರುಗಿದ ನಂತರ ಕಳೆದ ಸೋಮವಾರ ಅವರು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಮಥುರಾದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಅವರನ್ನು ನಿಯೋಜಿಸಲಾಗಿತ್ತು. ಅವರು ಅಲ್ಲಿಯೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತ ಸಂದೇಶ್ ಶೆಟ್ಟಿ ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ತಾಯಿ ಇಬ್ಬರು ಮಕ್ಕಳು ನೀರುಪಾಲು

ಮಂಡ್ಯ, ಜೂ. 14: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲದ ಬೀರನಹಳ್ಳಿ ಗ್ರಾಮದ ಗೀತಾ (40), ಸವಿತಾ (19) ಹಾಗೂ ಸೌಮ್ಯ (14) ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ಬಟ್ಟೆ ಒಗೆಯಲು ಕೆರೆ ಬಳಿ ಆಗಮಿಸಿದ್ದ ಇವರಲ್ಲಿ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಹಾಗೆ ಬಿದ್ದವರನ್ನು ಉಳಿಸಿಕೊಳ್ಳಲು ಹೋಗಿ ಇನ್ನಿಬ್ಬರೂ ಸಹ ನೀರುಪಾಲಾಗಿದ್ದಾರೆ. ಘಟನೆ ನಡೆದಾಗ ಕೆರೆ ಸುತ್ತಮುತ್ತ ಯಾರೂ ಇರಲಿಲ್ಲ ಎನ್ನಲಾಗಿದೆ. ಕೆರೆಯಲ್ಲಿ ತೇಲುತ್ತಿದ್ದ ಬಿಂದಿಗೆ, ದಡದಲ್ಲಿದ್ದ ಬಟ್ಟೆಗಳ ನೋಡಿ ಕೆರೆಯಲ್ಲಿ ಯಾರೋ ಬಿದ್ದಿದ್ದಾರೆ ಎನ್ನುವುದನ್ನು ಗಮನಿಸಿದ ಗ್ರಾಮಸ್ಥರು ಪರೀಕ್ಷಿಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.