ಮಡಿಕೇರಿ, ಜೂ. 14: ಭಾನುವಾರವಾದ ಇಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಕೊರೊನಾ ಸೋಂಕಿನ ನಡುವೆ ಮುಚ್ಚಲ್ಪಟ್ಟಿದ್ದ ಚರ್ಚ್‍ಗಳು ಬಾಗಿಲು ತೆರೆದುಕೊಂಡು ಕ್ರೈಸ್ತ ಸಮುದಾಯ ಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ, ಪೂಜೆ ಸಲ್ಲಿಸಿದರು.ನಗರದ ಸಂತ ಮೈಕಲರ ಚರ್ಚ್, ಶಾಂತಿ ಚರ್ಚ್, ಸುಂಟಿಕೊಪ್ಪ ಹಾಗೂ ಇತರೆಡೆಗಳಲ್ಲಿ ಧರ್ಮಗುರುಗಳ ನಿರ್ದೇಶನದಂತೆ ಸಾಮಾಜಿಕ ಅಂತರದೊಂದಿಗೆ ಭಕ್ತರು ಭಾಗವಹಿಸಿದ್ದರು. ಪ್ರಾರ್ಥನಾ ಸಭೆಗೆ ಆಗಮಿಸು ವವರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯಗೊಳಿಸಿದ್ದು, ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಡಿಕೇರಿಯಲ್ಲಿ ರೆ.ಫಾ. ಅಲ್‍ಫ್ರೆಡ್ ಮೆಂಡೊನ್ಸಾ ಹಾಗೂ ಫಾ. ನವೀನ್ ಕುಮಾರ್ ನೇತೃತ್ವ ವಹಿಸಿದ್ದರು.

ಮುಳ್ಳೂರು: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳು ದೇವಸ್ಥಾನ, ಮಸೀದಿ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಗೋಪಾಲಪುರದ ಸಂತ ಅಂತೋಣಿ ದೇವಾಲಯದಲ್ಲಿ ಎರಡೂವರೆ ತಿಂಗಳ ಲಾಕ್‍ಡೌನ್ ತರುವಾಯ ಚರ್ಚ್ ಬಾಗಿಲು ತೆರೆದು ಪ್ರಾರ್ಥನೆ ಸಲ್ಲಿಸಲಾಯಿತು. ಸರಕಾರದ ನಿಯಮದಂತೆ ಮತ್ತು ಧರ್ಮಾಧ್ಯಕ್ಷರ ಸೂಚನೆಯಂತೆ ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಭಾನುವಾರ ಬೆಳಗ್ಗೆ ಸಂತ ಅಂತೋಣಿ ದೇವಾಲಯದಲ್ಲಿ ಫಾದರ್ ಜಾಕಬ್ ಕೋಳನೂರು ಸಮ್ಮುಖದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಮೈಸೂರಿನ ಧರ್ಮಾಧ್ಯಕ್ಷರ ಆದೇಶದಂತೆ ಒಂದೇ ಪೂಜೆ ನಡೆಸಿದರೆ ಹೆಚ್ಚು ಜನರು ಬರುತ್ತಾರೆ ಮತ್ತು ಭಾನುವಾರ ಪೂಜೆ ನಡೆಸಿದರೆ ತುಂಬಾ ಜನರು ಬರುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಶನಿವಾರಸಂತೆ ವ್ಯಾಪ್ತಿಯ ಕ್ರೈಸ್ತ ಸಮುದಾಯದವರಿಗೆ ಗೋಪಾಲಪುರ ಚರ್ಚ್‍ನಲ್ಲಿ, 9 ಗಂಟೆಯಿಂದ ಬೀಟೆಕಟ್ಟೆ ಮತ್ತು ಕಳಲೆ ಚರ್ಚ್, ಹೊಸೂರು ಮತ್ತು ಕೊಡ್ಲಿಪೇಟೆ ಮತ್ತು ಬಸವನಕೊಪ್ಪ ಚರ್ಚ್‍ಗಳಲ್ಲಿ ಸಂಜೆ ಪೂಜೆ ನಡೆಸಿದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದು ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗೋಪಾಲಪುರ ಚರ್ಚ್‍ನಲ್ಲಿ ಕ್ರೈಸ್ತ ಸಮುದಾ ಯದ ಭಕ್ತಾದಿಗಳು ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

(ಮೊದಲ ಪುಟದಿಂದ)

ವೀರಾಜಪೇಟೆ: ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಮೂರು ತಿಂಗಳುಗಳಿಂದ ಬಂದ್ ಮಾಡಲಾಗಿದ್ದ ಸಂತ ಅನ್ನಮ್ಮ ದೇವಾಲಯವನ್ನು ಇಂದಿನಿಂದ ಆರಂಭಿಸಿ ಕ್ರೈಸ್ತ ಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯದ ಪ್ರಧಾನ ಧರ್ಮಾಧಿಕಾರಿ ರೆ:ಫಾ:ಮದಲೈಮುತ್ತು ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು.

ವೀರಾಜಪೇಟೆಯ ಕ್ರೈಸ್ತ ದೇವಾಲಯದ ಬಳಿಯಿರುವ ದ್ವಿಶತಮಾನೋತ್ಸವ ಭವನ ವಿಶಾ¯ವಾಗಿರುವುದರಿಂದ ಭಕ್ತಾದಿಗಳ ಅಪೇಕ್ಷೆಯಂತೆ ಬೆಳಿಗ್ಗೆ 7 ಗಂಟೆಗೆ, ನಂತರ 8.30 ಗಂಟೆಗೆ ಪೂಜಾ ಸೇವೆ ನಡೆಯಿತು.

ಕಡ್ಡಾಂಯವಾಗಿ ಸ್ಯಾನಿಟೈಸರ್ ನಿಂದ ಕೈತೊಳೆದು, ಮಾಸ್ಕ್ ಧರಿಸಿ ಭಕ್ತಾದಿಗಳನ್ನು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೇ ರೀತಿಯಲ್ಲಿ ಆರ್ಜಿ ಗ್ರಾಮ ಹಾಗೂ ಕೆದಮುಳ್ಳೂರಿನಲ್ಲಿರುವ ಕ್ರೈಸ್ತ ದೇವಾಲಯಗಳಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿದರು.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಚರ್ಚ್‍ಗಳಲ್ಲಿ ಇಂದು ಕ್ರೈಸ್ತ ಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಲಾಕ್‍ಡೌನ್ ನಂತರ ಇದೇ ಪ್ರಥಮವಾಗಿ ಚರ್ಚ್‍ಗಳು ತೆರೆದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದರಿಂದ ಬೆಳಿಗ್ಗೆ ಪ್ರಾರ್ಥನಾಲಯಗಳಿಗೆ ಆಗಮಿಸಿದ ಕ್ರೈಸ್ತ ಬಾಂಧವರು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಪಟ್ಟಣದ ಜಯವೀರಮಾತೆ ದೇವಾಲಯ, ಅಬ್ಬೂರುಕಟ್ಟೆ, ಸಿದ್ದಲಿಂಗಪುರ, ಒಡೆಯನಪುರ ಸೇರಿದಂತೆ ಇನ್ನಿತರ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚರ್ಚ್‍ನ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ಆರಾಧನೆಯಲ್ಲಿ ತೊಡಗಿದ್ದರು.

ಕೊಡ್ಲಿಪೇಟೆ: ಕೊಡ್ಲಿಪೇಟೆಯ ಐಪಿಸಿ ಚರ್ಚ್‍ನಲ್ಲಿ ಕ್ರೈಸ್ತ ಸಮುದಾಯದವರು ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಚರ್ಚ್ ಸಭಾಂಗಣ, ಆವರಣವನ್ನು ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲಾಗಿತ್ತು. ಸರಕಾರದ ಆದೇಶದಂತೆ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕೊರೊನಾ ವೈರಸ್ ನಿಗ್ರಹಕ್ಕಾಗಿ ದೇಶದ ಹಿತಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕುಶಾಲನಗರದ ಸಂತ ಸಬಾಸ್ಟೀನ್ ಚರ್ಚ್‍ನಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಾಮಾಜಿಕ ಅಂತರದೊಂದಿಗೆ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.