ಮಡಿಕೇರಿ, ಜೂ. 14: ಕೊಡಗು ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಿಂದ ಚಳಿ ಗಾಳಿಯ ನಡುವೆ ಬಿಟ್ಟು ಬಿಟ್ಟು ಮಳೆ ಬೀಳತೊಡಗಿದೆ. ನಿನ್ನೆ ಹಾಗೂ ಇಂದು ಮಳೆ ಮುಂದುವರಿದಿದೆ.
ಮಡಿಕೇರಿ ಗ್ರಾಮಾಂತರ ಪ್ರದೇಶಗಳ ಸಹಿತ ಜಿಲ್ಲಾ ಕೇಂದ್ರದಲ್ಲಿ ರಾತ್ರಿಯೂ ಮಳೆಯಾಗಿದೆ. ಹೀಗಾಗಿ ಚಳಿ ಹೆಚ್ಚಾಗಿದ್ದು, ಜೀವನದಿ ತಲಕಾವೇರಿ ವ್ಯಾಪ್ತಿಗೆ 2.48 ಇಂಚು ಸರಾಸರಿ ಮಳೆಯಾಗಿದೆ. ಭಾಗಮಂಡಲ ಸುತ್ತಮುತ್ತ 2.22 ಇಂಚು ಮಳೆ ದಾಖಲಾಗಿದೆ.ಮಡಿಕೇರಿ ಹುತಾತ್ಮರ ಸ್ಮಾರಕದ ಬಳಿ ವಿದ್ಯುತ್ ಕಂಬವೊಂದು ಮುರಿದು ಬಿದ್ದ ಘಟನೆ ನಡೆಯಿತು. ಇಲಾಖಾ ಸಿಬ್ಬಂದಿ ತೆರವುಗೊಳಿಸಿದರು.ದಕ್ಷಿಣ ಕೊಡಗಿನ ಅಲ್ಲಲ್ಲಿ ಹಾಗೂ ಉತ್ತರ ಕೊಡಗಿನ ಗಡಿಗಳಲ್ಲಿ ಕೂಡ ಮೋಡ, ತುಂತುರು ಮಳೆಯೊಂದಿಗೆ ಚಳಿ ಅಧಿಕವಾಗಿರುವ ಸನ್ನಿವೇಶ ಗೋಚರಿಸಿದೆ. ಇಂದು ಹಗಲು ಕೂಡ ಮಡಿಕೇರಿ, ವೀರಾಜಪೇಟೆ, ನಾಪೋಕ್ಲು, ಮೂರ್ನಾಡು, ಗೋಣಿಕೊಪ್ಪಲು, ಕರಿಕೆ ಸಹಿತ ಇತರೆಡೆಗಳಲ್ಲಿ ಉತ್ತಮ ಮಳೆಯಾಗಿರುವ ಮಾಹಿತಿ ಲಭಿಸಿದೆ.
ಮಳೆ ವಿವರ: ಜಿಲ್ಲಾ ಕೇಂದ್ರ ಮಡಿಕೇರಿಗೆ ಸರಾಸರಿ 0.72 ಇಂಚು, ಸಿದ್ದಾಪುರ 0.75 ಇಂಚು, ನಾಪೋಕ್ಲು 1.35 ಇಂಚು, ವೀರಾಜಪೇಟೆ 1.86 ಇಂಚು, ಗೋಣಿಕೊಪ್ಪಲು 0.92 ಇಂಚು, ಪೊನ್ನಂಪೇಟೆ 1.66 ಇಂಚು, ಕುಟ್ಟ 1.18 ಇಂಚು, (ಮೊದಲ ಪುಟದಿಂದ) ಶ್ರೀಮಂಗಲ 1.08 ಇಂಚು ಮಳೆ ದಾಖಲಾಗಿದೆ.
ಸೋಮವಾರಪೇಟೆ ವ್ಯಾಪ್ತಿಗೆ 0.04 ಇಂಚು, ಹಾರಂಗಿ 0.22 ಇಂಚು, ಸುಂಟಿಕೊಪ್ಪ ಹಾಗೂ ಕುಶಾಲನಗರ ಸುತ್ತಮುತ್ತ 0.19 ಇಂಚು, ಶನಿವಾರಸಂತೆ ವ್ಯಾಪ್ತಿಗೆ 0.12 ಇಂಚು ಮಳೆಯಾಗಿದೆ. ತಾ. 7 ರಿಂದ ಆರಂಭಗೊಂಡಿರುವ ಮೃಗಾಶಿರ ಮಳೆಯು ತಾ. 20ರ ತನಕ ಬೀಳಲಿದ್ದು, ತಾ. 21 ರಂದು ಅಮಾವಾಸ್ಯೆ ಬಳಿಕ ಆದ್ರ್ರಾ ಮಳೆ ಅಡಿಯಿಡುವ ಸಂಭವವಿದೆ.
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ತಾ. 13 ರಿಂದ ಎಡೆಬಿಡದೆ ಮಳೆ ಸುರಿಯಲು ಆರಂಭಿಸಿದೆ. ಹವಾಮಾನ ಇಲಾಖೆ ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಆರಂಭಗೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದರೂ ಕೂಡ ಚಂಡಮಾರುತದ ಕಾರಣದಿಂದ ಜಿಲ್ಲೆಗೆ ಮುಂಗಾರು ಪ್ರವೇಶಕ್ಕೆ ಘಳಿಗೆ ಕೂಡಿಬಂದಿರಲಿಲ್ಲ. ಶನಿವಾರ ಸಂಜೆಯಿಂದ ತುಂತುರು ಮಳೆ ಸುರಿಯುತ್ತಿದ್ದು, ಮುಂಗಾರು ಆರಂಭದ ಮುನ್ಸೂಚನೆ ಕಂಡು ಬರುತ್ತಿದೆ.
ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಳೆ ಸ್ವಲ್ಪವೂ ಬಿಡುವು ನೀಡದೆ ಸುರಿದಿದೆ. ಅಪರಾಹ್ನ ಎರಡು ಗಂಟೆಯಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವದು ಕಂಡು ಬಂದಿದೆ. ಆದರೆ ಮೋಡ ಕವಿದ ವಾತಾವರಣ, ಚಳಿ, ಬಿರುಸಿನ ಗಾಳಿ ಮುಂದುವರಿದಿದೆ. ಮಳೆ ಸುರಿದ ಪರಿಣಾಮ ನದಿ, ಹೊಳೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಭತ್ತದ ಕೃಷಿಕರು ಬಿರುಸಿನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಕಲ್ಪಿಸಿದೆ.
ಮುಂಗಾರು ಆರಂಭ ವಾಗಿರುವದರಿಂದ ರೈತಾಪಿ ವರ್ಗ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗದ್ದೆಗಳ ಉಳುಮೆ ಕಾರ್ಯಕ್ಕೆ ಸಿದ್ದತೆ ನಡೆಸಲಾಗಿದ್ದು, ರೈತರು ಕೃಷಿ ಸಲಕರಣೆಗಳನ್ನು ಜೋಡಿಸಿ ಕೊಳ್ಳುತ್ತಿದ್ದಾರೆ.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ತುಂತುರು ಮಳೆ ಯಾಗುತ್ತಿದ್ದು, ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಹೋಬಳಿಯಾದ್ಯಂತ ದಟ್ಟ ಮೋಡಗಳೊಂದಿಗೆ ಮಳೆಯಾಗುತ್ತಿದೆ.
ತಾಲೂಕಿನ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಲಗಳ ಉಳುಮೆ ಹಾಗೂ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ. ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕಾರ್ಯದಲ್ಲಿ ಬೆಳೆಗಾರರು ತೊಡಗಿಸಿಕೊಂಡಿದ್ದಾರೆ.
ಇನ್ನು ಮಳೆಗಾಲದ ವಾತಾವರಣ ಕಂಡುಬರುತ್ತಿರುವ ಹಿನ್ನೆಲೆ ಜನರು ಮಳೆಗಾಲಕ್ಕೆ ಹೊಂದಿಕೊಳ್ಳುವ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದಾರೆ. ಮನೆಗೆ ಬೇಕಾದ ಸೌದೆ, ಮನೆಯ ಚಾವಣಿ ದುರಸ್ತಿ ಕಾರ್ಯಗಳು ನಡೆಯುತ್ತಿವೆ.
ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಹೆಬ್ಬಾಲೆ ಶಿರಂಗಾಲ, ತೂರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಸಾಧಾರಣ ಮಳೆ ಬಿದ್ದಿದರಿಂದ ಈ ಭಾಗದಲ್ಲಿ ಬಿತ್ತನೆ ಮಾಡಿದ ಜೋಳದ ಬೆಳೆಗೆ ಅನುಕೂಲವಾಗಿದೆ.
ಸಿದ್ದಾಪುರ: ಸಿದ್ದಾಪುರ ಸುತ್ತ ಮುತ್ತ ಕಳೆದ ರಾತ್ರಿಯಿಂದ ಸಾಧಾರಣವಾಗಿ ಮಳೆ ಸುರಿದಿದೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆಯ ವತಿಯಿಂದ ಪ್ರಕಟಣೆ ಮೂಲಕ ಸೂಚಿಸಲಾಗಿದೆ.
ಗೋಣಿಕೊಪ್ಪಲು ಹಾಗೂ ಕರಿಕೆ ಭಾಗದಲ್ಲಿ ಮಧ್ಯಾಹ್ನ ತನಕ ಬಿರುಸಿನ ಮಳೆ ಕಂಡುಬಂದಿದೆ.
ಗೋಣಿಕೊಪ್ಪಲು: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಸಂತೆ ದಿನ ಮಾರುಕಟ್ಟೆಯ ವ್ಯಾಪಾರಕ್ಕಾಗಿ ಹಲವು ರೈತರು ಆಗಮಿಸಿದ್ದರು. ಬಿರುಸಿನಿಂದ ಸುರಿದ ಮಳೆಯಿಂದ ಇಂದು ವ್ಯಾಪಾರ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರಾದರೂ ತದನಂತರ ಮಳೆಯ ರಭಸ ಕಡಿಮೆಗೊಳ್ಳುತಿದ್ದಂತೆಯೆ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟರು.
ಮುಂಜಾನೆಯ ಮಳೆಯಿಂದಾಗಿ ನಗರಕ್ಕೆ ಸಾರ್ವಜನಿಕರು ಕಡಿಮೆ ಪ್ರಮಾಣದಲ್ಲಿ ಆಗಮಿಸಿದ್ದರು.ನಂತರ ಮೆಲ್ಲನೆ ನಾಗರಿಕರು ನಗರದತ್ತ ಆಗಮಿಸಿ ಅವಶ್ಯಕ ವಸ್ತುಗಳನ್ನು ಖರೀದಿಸಿ ತೆರಳಿದರು.ಮಳೆಯ ಹಿನ್ನೆಲೆಯಲ್ಲಿ ಕೊಡೆ ವ್ಯಾಪಾರ ಜೋರಾಗಿಯೇ ನಡೆಯಿತು. ಮಳೆಯಿಂದಾಗಿ ಚರಂಡಿಯಲ್ಲಿದ್ದ ಕಸ, ಕಡ್ಡಿಗಳು ಕೊಚ್ಚಿಹೋಗಿ ಚರಂಡಿ, ರಸ್ತೆ ಶುಚಿಯಾದವು.
ಶನಿವಾರಸಂತೆ: ಹೋಬಳಿಯಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಸಾಧಾರಣ ಮಳೆ ಸುರಿತು. ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೆಹೊಸೂರು, ಶಿಡಿಗಳಲೆ, ನಿಡ್ತ, ದೊಡ್ಡಳ್ಳಿ ಮತ್ತಿತರ ಗ್ರಾಮಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ವರೆಗೆ 8 ಇಂಚು ಮಳೆಯಾಗಿದೆ.
ಶಿಡಿಗಳಲೆ ಗ್ರಾಮದಲ್ಲಿ ಕೆಲವು ರೈತರು 6 ತಿಂಗಳ ಬೆಳೆಯಾದ ರಾಜಮುಡಿ ಭತ್ತದ ಹುಡಿ ಅಗೆ ಹಾಕಿದ್ದಾರೆ. ಮಳೆ ಸಕಾಲಕ್ಕೆ ಸರಿಯಾಗಿ ಸುರಿಯುತ್ತಿಲ್ಲ. ಗದ್ದೆಯಲ್ಲಿ ನೀರಿಲ್ಲ. ಮಳೆಯಾಗದೇ ಭತ್ತದ ವ್ಯವಸಾಯ ಸಾಧ್ಯವಿಲ್ಲ ಎಂದು ಕೃಷಿಕ ಎಸ್.ಎಂ. ಉಮಾಶಂಕರ್ ಬೇಸರ ವ್ಯಕ್ತಪಡಿಸಿದರು.
ವರದಿ: ವಿಜಯ್, ಪ್ರಭಾಕರ್, ನಾಗರಾಜ ಶೆಟ್ಟಿ, ವಾಸು, ಜಗದೀಶ್, ಸುಧೀರ್, ನರೇಶ್, ಡಿ.ಎಂ.ಆರ್,