ಗೋಣಿಕೊಪ್ಪ ವರದಿ, ಜೂ. 14: ಇಲ್ಲಿನ ಗ್ರಾಮ ಪಂಚಾಯಿತಿ ಮೂಲಕ ಸರಬರಾಜಾಗುವ ನಲ್ಲಿ ನೀರಿನಲ್ಲಿ ಸತ್ತು ಕೊಳೆತಿರುವ ಜಂತುಗಳು ನೀರಿನೊಂದಿಗೆ ಪಾತ್ರೆಗೆ ಬೀಳುವ ಮೂಲಕ ಸ್ಥಳೀಯರಲ್ಲಿ ರೋಗ ಹರಡುವ ಬಗ್ಗೆ ಆತಂಕ ಸೃಷ್ಟಿಸಿದೆ.
ಪಟ್ಟಣದ 2ನೇ ವಿಭಾಗದಲ್ಲಿ ಶನಿವಾರ ಸಂಜೆ ಸುಮಾರಿಗೆ ರಂಜಿತ್ ಎಂಬವರ ಮನೆಗೆ ಕುಡಿಯುವ ನೀರಿಗಾಗಿ ನಲ್ಲಿಯಲ್ಲಿ ಇಟ್ಟ ಪಾತ್ರೆಗೆ ಯಾವುದೋ ಜಂತುಗಳ ಸತ್ತು ಕೊಳೆತಿರುವ ತುಂಡುಗಳು ಬಿದ್ದಿದೆ. ಕೊಳೆತಿರುವ ಜಂತುವಿನ ದೇಹದಲ್ಲಿ ಶಿಲೀಂದ್ರಗಳು ಕಾಣಿಸಿಕೊಂಡಿದೆ. ಆದರೆ ಇದು ಯಾವ ಜಂತು ಎಂಬುದು ಅರಿವಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯರು ಒಂದಷ್ಟು ಸಮಯ ನೀರು ಸರಬರಾಜಿನಲ್ಲಿ ತಡೆಯಾಗಿತ್ತು. ನಂತರ ಇದು ಕಾಣಿಸಿಕೊಂಡಿದ್ದು, ಇಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಪಟ್ಟಣದ ಬಾಡಿಗೆ ವಾಹನ ನಿಲ್ದಾಣ ಸಮೀಪವಿರುವ ಟ್ಯಾಂಕ್ ನಿಂದ ನೀರು ಸರಬರಾಜು ಆಗುತ್ತಿದ್ದು, ಟ್ಯಾಂಕ್ ಸ್ವಚ್ಛ ಮಾಡದ ಕಾರಣ ಈ ರೀತಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲ ಕೂಡ ಆರಂಭವಾಗಿರುವುದರಿಂದ ಜನರಿಗೆ ಕಾಯಿಲೆಗಳು ಬಂದರೆ ಏನು ಗತಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ತಕ್ಷಣ ಟ್ಯಾಂಕ್ ಸ್ವಚ್ಛಗೊಳಿಸಲು ಆಗ್ರಹಿಸಿದ್ದಾರೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸಿದ ಪಿಡಿಒ ಶ್ರೀನಿವಾಸ್ ಟ್ಯಾಂಕ್ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
- ಸುದ್ದಿಪುತ್ರ