ಕೂಡಿಗೆ, ಜೂ. 13: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಊಳುಗಲ್ಲಿ ಮಟ್ಟಿ ಎಂಬ ಬೆಟ್ಟದ ತುದಿಯಲ್ಲಿ ನಿವೇಶನ ರಹಿತರು ಮನೆ ನಿರ್ಮಾಣ ಮಾಡಲು ಮುಂದಾಗಿದ್ದು, ಮಳೆಗಾಲದ ಸಂದರ್ಭ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಇಲ್ಲಿನ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕೂಲಿ ಕಾರ್ಮಿಕರು ವಸತಿ ಸೌಕರ್ಯವಿಲ್ಲದೆ ತಮ್ಮ ಜೀವನವನ್ನು ಬಾಡಿಗೆ ಮನೆಯಲ್ಲಿ ಸಾಗಿಸುತ್ತಿದ್ದಾರೆ. ಈ ಪೈಕಿ ಹಲವರು ಕೂಡಿಗೆ ಗ್ರಾಮ ಪಂಚಾಯಿತಿ ಊಳುಗಲ್ಲಿ ಮಟ್ಟೆ ಎಂಬ ಬೆಟ್ಟದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದರೂ ಯಾವ ಅಧಿಕಾರಿಯೂ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.ಅನೇಕ ಗ್ರಾಮ ಸಭೆಗಳಲ್ಲಿ ವಸತಿ ರಹಿತರು ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, (ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನಗಳೂ ಅನುಷ್ಠಾನ ವಾಗುತ್ತಿಲ್ಲ. ಬೆಟ್ಟದ ಮೇಲೆ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಬದಲಿ ಜಾಗ ಗುರುತಿಸಿ ನೀಡಿದಲ್ಲಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

ಕಂಡರೂ ಕಾಣದಂತಿರುವ ಪಂಚಾಯಿತಿ

ಮಲ್ಲೇನಹಳ್ಳಿ ಗ್ರಾಮದ ಸಮೀಪ ಉಳುಗಲ್ಲಿ ಬೆಟ್ಟದ ಮೇಲೆ ಪೈಸಾರಿ ಜಾಗದಲ್ಲಿ ಸಣ್ಣ ಮನೆಗಳ ನಿರ್ಮಾಣ ಕಾರ್ಯ ಕಳೆದ 8 ತಿಂಗಳುಗಳಿಂದ ನೆಡೆಯುತ್ತಿದ್ದರೂ ಸಹ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಗ್ರಾಮ ಪಂಚಾಯಿತಿ ಮೌನವಹಿಸಿದೆ.

ಬೆಟ್ಟಕ್ಕೆ ತೆರಳಲು ರಸ್ತೆ ಇಲ್ಲ, ಕಾಲು ದಾರಿಯಲ್ಲೇ ಬೆಟ್ಟಕ್ಕೆ ತೆರಳಬೇಕಾಗಿದ್ದು, ಕಾಲು ದಾರಿಯಲ್ಲೇ ಹಲವರು ಮನೆಯ ನಿರ್ಮಾಣಕ್ಕೆ ಬೇಕಾಗುವ ಇಟ್ಟಿಗೆ, ಕಲು,್ಲ ಮರಳು, ಸಿಮೆಂಟ್ ಸೇರಿದಂತೆ ನೀರನ್ನು ಕೊಂಡೊಯ್ದು ಮನೆಯ ಕೆಲಸವನ್ನು ಮುಗಿಸಿ ಗೃಹ ಪ್ರವೇಶ ಮಾಡಿರುವುದು ವಿಶೇಷವಾಗಿದೆ. ಈಗಾಗಲೇ ಮೂರು ಮನೆಗಳು ನಿರ್ಮಾಣಗೊಂಡಿದ್ದು, ಇನ್ನೂ ಮೂರು ಮನೆಗಳಿಗೆ ಅಡಿಪಾಯ ಹಾಕಲಾಗಿದೆ.

ಬೆಟ್ಟದ ಮೇಲೆ ಮನೆ ನಿರ್ಮಾಣ ಮಾಡಿದವರು ತಮ್ಮ ಮನೆಗೆ ವಿದ್ಯುತ್ ಸೌಲಭ್ಯ ಅಳವಡಿಸಿಕೊಳ್ಳಲು ಎನ್.ಓ.ಸಿ. ಪಡೆಯಲು ಗ್ರಾಮ ಪಂಚಾಯಿತಿಗೆ ಬಂದಾಗ ಬೆಟ್ಟದ ಮೇಲೆ ಮನೆ ನಿರ್ಮಾಣ ವಾಗಿರುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ನಮ್ಮ ಗಮನಕ್ಕೆ ಇದುವರೆಗೂ ಯಾವುದೇ ಮಾಹಿತಿ ಬಂದಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಅವರು, ಪ್ರತಿಕ್ರಿಯಿಸಿ ಅಲ್ಲಿ ಮನೆಕಟ್ಟಿರುವವರು ಎನ್.ಓ.ಸಿ.ಗೆ ಬಂದಾಗ ಮನೆ ಕಟ್ಟಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯರು ಕೂಡ ನಮ್ಮ ಗಮನಕ್ಕೆ ತಂದಿಲ್ಲ. ತಾನು ಸ್ಥಳ ಪರಿಶೀಲನೆ ಮಾಡಿದ್ದು, ಪೈಸಾರಿ ಜಾಗವಾಗಿರುವುದರಿಂದ ಈಗಾಗಲೇ ಕಂದಾಯ ಇಲಾಖೆ ತಹಶೀಲ್ದಾರ್ ಮತ್ತು ಕುಶಾಲನಗರ ಹೋಬಳಿ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ತಹಶೀಲ್ದಾರ್ ಸೋಮವಾರ ಸ್ಥಳ ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

-ಕೆ.ಕೆ.ಎನ್.