ಮಡಿಕೇರಿ, ಜೂ. 13: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮುಖಾಂತರ ಮಡಿಕೇರಿ ಕೋಟೆಯಲ್ಲಿರುವ ಅರಮನೆಯ ಸಂರಕ್ಷಣೆಗಾಗಿ ನಡೆಸಿರುವ ಪ್ರಯತ್ನಕ್ಕೆ ಪೂರಕವಾಗಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾರಂಭಗೊಂಡಿರುವ ಪ್ರಾರಂಭಿಕ ಕೆಲಸಕ್ಕೆ ಒಂದೆಡೆ ಕೊರೊನಾ ತೊಡಕಾದರೆ, ಈಗ ಎದುರಾ ಗಲಿರುವ ಮಳೆಯು ಇನ್ನಷ್ಟು ಹಾನಿ ತಂದೊಡ್ಡುವ ಸನ್ನಿವೇಶ ಗೋಚರಿಸತೊಡಗಿದೆ.ಇಲ್ಲಿನ ನಿವೃತ್ತ ಅಧಿಕಾರಿ ಆಲೂರು-ಸಿದ್ದಾಪುರ ನಿವಾಸಿ ವಿರೂಪಾಕ್ಷಯ್ಯ ವಕೀಲ ರವೀಂದ್ರನಾಥ್ ಕಾಮತ್ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಅರಮನೆಯ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ರಕ್ಷಿಸುವದರೊಂದಿಗೆ, ಜಿಲ್ಲಾಡಳಿತದ ಕಚೇರಿಗಳ ತೆರವಿಗೆ ಬೇಡಿಕೆ ಸಲ್ಲಿಸಿದ್ದರು. ಈ ವೇಳೆ ರಾಜ್ಯ ಸರಕಾರದೊಂದಿಗೆ ಜಿಲ್ಲಾಡಳಿತ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನ್ಯಾಯಾಲಯ ನೋಟೀಸ್ ಜಾರಿಗೊಳಿಸಿತ್ತು.ವಿಷಯದ ಸೂಕ್ಷ್ಮತೆ ಅರಿತ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು, ಅರಮನೆಯ ಎಲ್ಲಾ ಕಚೇರಿಗಳನ್ನು ತೆರವುಗೊಳಿಸಿ ಅಭಿವೃದ್ಧಿಗೆ ಒತ್ತು ನೀಡುವ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಅಲ್ಲದೆ ಪ್ರಥಮ ಹಂತದಲ್ಲಿ ಅರಮನೆಯ ಸೋರುವಿಕೆ ತಡೆಗಾಗಿ ರೂ. 52 ಲಕ್ಷ ಅನುದಾನ ಪ್ರಕಟಿಸಿತ್ತು. ಈ ಮೊತ್ತದಲ್ಲಿ ಪ್ರಥಮ ಹಂತದ ಕಾಮಗಾರಿಗೆ ಕಳೆದ ಫೆಬ್ರವರಿಯಲ್ಲಿ ಚಾಲನೆ ಲಭಿಸಿತ್ತು.
ಆ ಬಳಿಕ ಕೊರೊನಾ ‘ಲಾಕ್‍ಡೌನ್’ ಕಾರಣಕ್ಕಾಗಿ ಕೆಲಸ ಸ್ಥಗಿತಗೊಂಡಿತ್ತು. ಬಹುದಿನಗಳ ನಂತರ ಅರಮನೆಯ ಮೇಲ್ಚಾವಣಿಯಿಂದ ಕುಸಿದು ಬೀಳುತ್ತಿದ್ದ ಮಾಡುಗಳ ಹೆಂಚುಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ ಎಲ್ಲೆಲ್ಲಿ ಮಳೆಗಾಲದಲ್ಲಿ ಸೋರುತ್ತಿತ್ತೊ ಅಂತಹ ಕಡೆಗಳಲ್ಲಿ ಹೆಂಚಿನ ಅಡಿಯಲ್ಲಿ ಮರಗಳ ಸುರಕ್ಷತೆಗಾಗಿ ಮಾಡುವಿಗೆ ಹಿಂದೆ ಅಳವಡಿಸಿದ್ದ ತಗಡು ಹಾಸುಗಳನ್ನು ಹೊಸತಾಗಿ ಜೋಡಣೆ ಮಾಡುವ ಕಾರ್ಯ ಕೈಗೊಳ್ಳಲಾಗಿತ್ತು.
ಅದೇ ಸೀಮಿತ : ಈಗಿನ ಪರಿಸ್ಥಿತಿಯಲ್ಲಿ ಇಡೀ ಅರಮನೆಯ ಹೆಂಚುಗಳನ್ನು ತೆರವುಗೊಳಿಸಿ, ಸೋರುವಿಕೆ ತಡೆಗಾಗಿ ಅಲ್ಲಲ್ಲಿ ಹಾನಿಗೊಂಡಿದ್ದ ತಗಡು ಕಿತ್ತೊಗೆದು ಹೊಸ ತಗಡು ಅಳವಡಿಕೆಗೆ ಮಾತ್ರ ಕೆಲಸ ಸೀಮಿತಗೊಂಡಿದೆ. ಪರಿಣಾಮ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಈ ಅರಮನೆ ಕಟ್ಟಡ ಹೆಂಚು ತೆರವುಗೊಳಿಸಿರುವ ಹಿನ್ನೆಲೆ ಇನ್ನಷ್ಟು ಅಪಾಯಕ್ಕೆ ಸಿಲುಕುವಂತಾಗಿದೆ. ಒಟ್ಟಾರೆ ಅತಂತ್ರ ಸನ್ನಿವೇಶದಲ್ಲಿ ಅರಮನೆಗೆ ಸಂಚಕಾರ ಉಂಟಾಗುವಂತಾಗಿದೆ.
ಈಗಾಗಲೇ ಎಲ್ಲಾ ಸರಕಾರಿ ಕಚೇರಿ ಕೆಲಸಗಳು ಅರಮನೆಯಿಂದ ಬೇರೆಡೆಗೆ ವರ್ಗಾಯಿಸಲ್ಪಟ್ಟಿರುವ ಸನ್ನಿವೇಶದಲ್ಲಿ, ಈ ಐತಿಹಾಸಿಕ ಕೋಟೆ ಹಾಗೂ ಅರಮನೆ ಒಂದು ರೀತಿ ಅಸ್ಥಿಪಂಜರದಂತೆ ಭಾಸವಾಗ ತೊಡಗಿದೆ. ಮೇಲ್ಚಾವಣಿ ಹೆಂಚು ತೆರವುಗೊಳಿಸಿರುವ ಪರಿಣಾಮ, ಕಟ್ಟಡದ ಸಂರಕ್ಷಣೆ ಬದಲಿಗೆ ಇನ್ನಷ್ಟು ಮಳೆಯಿಂದ ಎಲ್ಲವೂ ತೊಯ್ದು ಹೋಗಿ ಶಿಥಿಲವಾಗುವ ಸ್ಥಿತಿ ಕಾಣು ವಂತಾಗಿದೆ. ಎನ್ನುವದು ಮೇಲ್ನೋಟಕ್ಕೆ ಭಾಸವಾದ ಚಿತ್ರಣ. “ಶಕ್ತಿ”ಗೆ ಮೂಲವೊಂದರಿಂದ ತಿಳಿದುಬಂದ
(ಮೊದಲ ಪುಟದಿಂದ) ಈ ಕೆಲಸ ಕೇವಲ ತಾತ್ಕಾಲಿಕವಾಗಿದೆ. ಕೋಟೆಯನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಉಳಿಸಿ ಕೊಂಡು ಪೂರ್ಣ ಪ್ರಮಾಣದಲ್ಲಿ ದುರಸ್ತಿಯೊಂದಿಗೆ ಬಲಯುತವಾಗಿ ಮಾಡಲು ಈಗಾಗಲೇ ಪ್ರಾಚ್ಯ ವಸ್ತು ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರೂ. 10 ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಅಂಗೀಕಾರಕ್ಕಾಗಿ ಕಳುಹಿಸಿ ಕೊಡಲಾಗಿದೆ. ಸರಕಾರದಿಂದ ಅನುಮೋದನೆ ದೊರೆತೊಡನೆ ಕಾಮಗಾರಿ ಆರಂಭಗೊಳ್ಳಲಿ ರುವದಾಗಿ ತಿಳಿದುಬಂದಿದೆ. ಪೂರ್ಣ ಪ್ರಮಾಣದ ಕೆಲಸ ಮುಗಿದ ಬಳಿಕವಷ್ಟೆ ಪ್ರವಾಸಿಗರಿಗೆ ಕೋಟೆಯ ಸ್ಪಷ್ಟ ದರ್ಶನಕ್ಕೆ ಅವಕಾಶ ಲಭ್ಯವಾಗಲಿದ್ದು ಗತಕಾಲದ ವೈಭವದ ಚಿತ್ರಣ ಮೆಲುಕು ಹಾಕಲು ಅವಕಾಶವಾಗಲಿದೆ. -ಶ್ರೀಸುತ