ಕೊರೊನಾ ವೈರಸ್ ದುಬೈಯನ್ನೂ ಬಿಡದೇ ಅಟ್ಟಹಾಸ ಮೆರೆಯುತ್ತಿದ್ದ ಹೊತ್ತು. ದುಬೈನಲ್ಲಿ ಆರು ವರ್ಷಗಳಿಂದ ನೆಲಸಿದ್ದ ನಿತಿನ್ ಚಂದ್ರ ಮತ್ತು ಅತಿರಾ ದಂಪತಿಗೆ ತಳಮಳ ಪ್ರಾರಂಭವಾಗಿತ್ತು. ದುಬೈನಲ್ಲಿ ಹೊರಗಡೆ ಹೋಗಲು ಸಾಧ್ಯವಾಗದ ಲಾಕ್‍ಡೌನ್ ದಿನಗಳಲ್ಲಿ ಈ ದಂಪತಿಯ ಮನೆಗೆ ಮಗು ಬರುವ ಸಂಭ್ರಮ ಇತ್ತು. ಆದರೆ, ಕೊರೊನಾ ಸೋಂಕಿತ ರೋಗಿ ಗಳಿಂದ ದುಬೈನ ಆಸ್ಪತ್ರೆಗಳು ತುಂಬಿತುಳುಕುತ್ತಿರಬೇಕಾದರೆ ತಮ್ಮ ಮಗು ಈ ಸನ್ನಿವೇಶದಲ್ಲಿ ಭುವಿಗೆ ಬರುವುದು ಬೇಡ ಎಂದು ನಿತಿನ್-ಅತಿರಾ ದಂಪತಿ ಬಯಸಿದ್ದರು. ಏನು ಮಾಡೋದು ಲಾಕ್‍ಡೌನ್ ಮತ್ತು ಅಂತರ ರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಇವರಿಗೆ ತಮ್ಮ ತವರೂರು ಕೇರಳಕ್ಕೆ ಬರಲಾಗದ ಸಂದಿಗ್ಧತೆ ಎದುರಾಗಿತ್ತು.
ಇಂಥಹ ಸ್ಥಿತಿಯಲ್ಲಿ ನಿತಿನ್ ಚಂದ್ರ ದುಬೈನಲ್ಲಿದ್ದ ಇತರ ಭಾರತೀಯ ಗೆಳೆಯರೊಂದಿಗೆ ಸಣ್ಣ ಹೋರಾಟವನ್ನೇ ಪ್ರಾರಂಭಿಸುತ್ತಾರೆ. ನಮ್ಮನ್ನು ಮರಳಿ ಭಾರತಕ್ಕೆ ಕರೆದೊಯ್ಯಿರಿ ಎಂಬ ಅಭಿಯಾನ ಪ್ರಾರಂಭವಾಗುತ್ತದೆ. ಈ ಬಗ್ಗೆ ಭಾರತದ ಸುಪ್ರಿಂಕೋರ್ಟ್‍ನಲ್ಲಿಯೂ ನಿತಿನ್ ಪತ್ನಿ ಅತಿರಾ ಹೆಸರಿನಲ್ಲಿ ವಕಾಲತ್ತು ಹಾಕುತ್ತಾರೆ.
ಮಾರ್ಚ್ ಕಳೆದು, ಏಪ್ರಿಲ್ ಮುಗಿದರೂ ಅಂತರರಾಷ್ಟ್ರೀಯ ವಿಮಾನ ಯಾನ ಪ್ರಾರಂಭವಾಗುವುದಿಲ್ಲ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತೇ ವಿನಾ ಕಡಿಮೆಯಾಗಲಿಲ್ಲ. ತಮ್ಮ ಕಂದಮ್ಮ ಭಾರತದಲ್ಲಿಯೇ ಭುವಿಗೆ ಬರಬೇಕು ಎಂಬ ಅಭಿಲಾಷೆ ನಿತಿನ್‍ಚಂದ್ರನಲ್ಲಿ ತೀವ್ರವಾಗ ತೊಡಗಿತು. ದುಬೈನಲ್ಲಿದ್ದ ಕಲಾಕೇಂದ್ರದ ಸಂಚಾಲಕರಾಗಿ ಮತ್ತು ಓ ಪಾಸಿಟಿವ್ ಎಂಬ ರಕ್ತದಾನಿಗಳ ಗುಂಪಿನಲ್ಲಿ ಸಕ್ರಿಯರಾಗಿದ್ದ ನಿತಿನ್ ಮತ್ತಷ್ಟು ಪ್ರಬಲವಾಗಿ ಧ್ವನಿ ಎತ್ತಿ ಭಾರತಕ್ಕೆ ಕರೆದೊಯ್ಯಿರಿ ಎಂಬ ಹೋರಾಟ ಮುಂದುವರೆಸುತ್ತಾರೆ. ಕೊರೊನಾ ಸೋಂಕು ಪೀಡಿತರಲ್ಲಿದ್ದ ಕೇರಳಿಗರ ನೆರವಿಗೆ ನಿತಿನ್ ಮತ್ತು ಆತನ ಗೆಳೆಯರ ತಂಡ ಧಾವಿಸಿ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಕೊನೆಗೂ ಮೇ ಮೊದಲ ವಾರದಲ್ಲಿ ಭಾರತದಿಂದ ವಂದೇಮಾತರಂ ಯೋಜನೆಯಡಿ ದುಬೈನಿಂದ ವಿಮಾನದಲ್ಲಿ ಅನಿವಾಸಿಗಳನ್ನು ಕರೆತರುವ ದಿನಾಂಕ ನಿರ್ಧರಿಸಲ್ಪಡುತ್ತದೆ. ಅಂದು ನಿತಿನ್-ಅತಿರಾ ದಂಪತಿ ಸಂತೋಷಕ್ಕೆ ಪಾರವೇ ಇರಲಿಲ್ಲ. ತಾವು ಕೇರಳಕ್ಕೆ ತೆರಳಿ ಅಲ್ಲಿಯೇ ಮಗುವನ್ನು ಮುದ್ದಾಡುವ ಕನಸಿನ ಸರಮಾಲೆಯನ್ನೇ ಈ ದಂಪತಿ ಧರಿಸುತ್ತಾರೆ. ದುಬೈನ ಭಾರತೀಯ ರಾಯಭಾರಿ ಕಚೇರಿಯೂ ಅತಿರಾಳಿಗೆ ವಂದೇಮಾತರಂ ವಿಮಾನದಲ್ಲಿ ತೆರಳಲು ಮೊದಲ ಪ್ರಾಶಸ್ತ್ಯ ನೀಡುತ್ತದೆ.
ಮೇ. 6-ವಿಮಾನದಲ್ಲಿ ತೆರಳಲು ಒಂದು ದಿನ ಬಾಕಿಯಿದೆ ಎನ್ನುವಾಗ ನಿತಿನ್‍ಗೆ ಕರೆಯೊಂದು ಬರುತ್ತದೆ. ತನ್ನ ವೃದ್ಧ ತಂದೆಗೆ ಕೇರಳಕ್ಕೆ ಮರಳಲೇಬೇಕಾಗಿದ್ದು ಮೊದಲ ಹಾರಾಟದಲ್ಲಿ ಪಯಣಿಸಲು ಟಿಕೇಟ್ ಲಭ್ಯವಾಗಿದೆ. ನೀವೇನಾದರು ಸಹಾಯ ಮಾಡಲು ಸಾಧ್ಯವೇ ಎಂಬ ಕರೆಯದು. ಹಿಂದೆ-ಮುಂದೆ ಯೋಚಿಸದ ನಿತಿನ್ ಹಾಗಿದ್ದರೆ ಸರಿ. ನಾನು ಕೇರಳಕ್ಕೆ ತೆರಳಲಾರೆ. ನೀವು ನನ್ನ ಟಿಕೇಟ್‍ನಲ್ಲಿ ವಿಮಾನದಲ್ಲಿ ತೆರಳಿ ಎಂದು ಉದಾರತೆ ತೋರುತ್ತಾರೆ. ಮಾತ್ರವಲ್ಲ, ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆ ಗೀಡಾಗಿದ್ದ ಇಬ್ಬರು ಪ್ರಯಾಣಿಕರಿಗೆ ತಾವೇ ವಿಮಾನದ ಟಿಕೇಟ್ ಹಣ ನೀಡುತ್ತಾರೆ.
ಮೇ 7 ರಂದು ದುಬೈ ವಿಮಾನ ನಿಲ್ದಾಣದಲ್ಲಿ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ನಿತಿನ್ ಬೀಳ್ಕೊಟ್ಟು ಮುಂದಿನ ತಿಂಗಳಿನಲ್ಲಿಯೇ ತಾನೂ ಜತೆಗೂಡುವೆ ಎಂಬ ಭರವಸೆ ನೀಡುತ್ತಾರೆ.
ವಂದೇಮಾತರಂ ವಿಮಾನ ಕೇರಳದ ಕೊಚ್ಚಿಗೆ ಬಂದಿಳಿದಾಗ ವಿಮಾನದಲ್ಲಿದ್ದ 272 ಪ್ರಯಾಣಿಕರೂ ತಮ್ಮನ್ನು ಕೇರಳಕ್ಕೆ ಮರಳಿ ತರುವಲ್ಲಿ ನಿತಿನ್ ನಡೆಸಿದ ಹೋರಾಟಕ್ಕೆ ಪ್ರಶಂಸೆಯ ಜೈಕಾರ ಮೊಳಗಿಸುತ್ತಾರೆ.
ಜೂನ್ 7 ರಂದು ದುಬೈನಲ್ಲಿ ನಿತಿನ್ ತನ್ನ 28ನೇ ಹುಟ್ಟು ಹಬ್ಬವನ್ನು ಪತ್ನಿಯಿಲ್ಲದ ಕೊರಗಿನಲ್ಲಿಯೇ ಗೆಳೆಯರ ವಾಟ್ಸಪ್ ಶುಭ ಸಂದೇಶಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಅತಿರಾ ಕೂಡ ಕರೆ ಮಾಡಿ ಇನ್ನೇನು ಇದೇ ವಾರದಲ್ಲಿ ಮಗುವಿಗೆ ಜನ್ಮ ನೀಡುವ ಸಂದೇಶವನ್ನೂ ನೀಡುತ್ತಾಳೆ.
ಆದರೆ, ಜೂನ್ 8 ರ ಬೆಳಗ್ಗೆ ಅತಿರಾಳ ತಂದೆ-ತಾಯಿ ಲಗುಬಗೆಯಿಂದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಮಗಳು ಯಾಕೆ, ಏನು ಎಂದು ಕೇಳುವುದರೊಳಗಾಗಿ ಆಕೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತದೆ. ಅತಿರಾಳ ಪ್ರಶ್ನೆಗಳಿಗೆ ವೈದ್ಯರಾಗಲೀ, ಪೋಷಕರಾಗಲೀ ಯಾವುದೇ ಉತ್ತರ ಹೇಳುವುದಿಲ್ಲ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಅತಿರಾ ದುಬೈನಲ್ಲಿದ್ದ ನಿತಿನ್‍ಗೆ ಕರೆ ಮಾಡಿ ಅವನೊಂದಿಗೆ ಮಾತನಾಡಬೇಕೆಂದು ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಸ್ಪಂದಿಸುವುದಿಲ್ಲ. ಇನ್ನೇನು ನಿತಿನ್ ಬಂದು ಬಿಡುತ್ತಾನೆ ಎಂಬ ನೀರಸ ಉತ್ತರ ಅತಿರಾಳಿಗೆ ಸಿಗುತ್ತದೆ.
ಜೂನ್ 10 ಕ್ಕೆ ಅತಿರಾಳಿದ್ದ ಆಸ್ಪತ್ರೆಗೆ ನಿತಿನ್ ಕೊನೆಗೂ ಆಗಮಿಸುತ್ತಾನೆ. ನಿತಿನ್ ಬಂದಿರುವ ಸುದ್ದಿ ಕೇಳಿದ ಅತಿರಾ ಪುಟ್ಟ ಕಂದಮ್ಮನನ್ನು ನಿತಿನ್‍ಗೆ ತೋರಿಸುವ ಸಡಗರ ತೋರುತ್ತಾಳೆ. ಕೊನೆಗೂ ಅತಿರಾಳನ್ನು ನಿತಿನ್ ಬಳಿ ಕರೆದೊಯ್ಯಲಾಗುತ್ತದೆ. ಅಲ್ಲಿ ನೋಡಿದೊಡನೆ ಬಿಗಿದಪ್ಪಿ ಮುದ್ದು ತೋರಬೇಕಾಗಿದ್ದ ನಿತಿನ್ ಮೌನವಾಗಿ ಮಲಗಿಬಿಟ್ಟಿದ್ದ. ಅದನ್ನು ಕಂಡ ಅತಿರಾ ಪ್ರಜ್ಞೆ ತಪ್ಪಿ ಕುಸಿದುಬೀಳುತ್ತಾಳೆ.
ಆಗಿದಿಷ್ಟು, ದುಬೈನಲ್ಲಿ ಇನ್ನೇನು ಮುಂದಿನವಾರ ಮತ್ತೊಂದು ವಿಮಾನದಲ್ಲಿ ಕೇರಳಕ್ಕೆ ತೆರಳುವ ಕನಸು ಹೊತ್ತು ಮಲಗಿದ್ದ ನಿತಿನ್ ನಿದ್ದೆಯಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದುಬಿಟ್ಟಿದ್ದ.
ಗೆಳೆಯರು ಮರುದಿನ ಬಂದು ನೋಡಿದಾಗ ನಿತಿನ್ ಇನ್ನಿಲ್ಲವಾಗಿದ್ದ. ಕೇರಳದಲ್ಲಿನ ಅತಿರಾ ಪೋಷಕರಿಗೆ ವಿಷಯ ತಿಳಿಸಿದಾಗ ಅವರು ಮನೆಯ ಲ್ಲಿದ್ದ ಮಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿಬಿಟ್ಟರು.
ಅತಿರಾಳಿಗೆ ನಿತಿನ್ ಸಾವನ್ನಪ್ಪಿರುವ ವಿಚಾರ ಹೇಳುವ ಧೈರ್ಯ ಯಾರಿಗೂ ಬಾರಲಿಲ್ಲ. ಕೊನೆಗೆ ನಿತಿನ್‍ನ ಮೃತದೇಹವನ್ನೇ ಅತಿರಾ ನೋಡಬೇಕಾಯಿತು. ಯಾವ ಯುವಕ ತಮಗಾಗಿ ಹೋರಾಟ ಕೈಗೊಂಡು ತಾವೆಲ್ಲಾ ಕೇರಳಕ್ಕೆ ತಲುಪುವಂತೆ ಮಾಡಿದನೋ, ಅವನೇ ಇನ್ನಿಲ್ಲ ಎಂಬುದನ್ನು ಸ್ವಗ್ರಾಮಕ್ಕೆ ಮರಳಿದ ದುಬೈವಾಸಿಗಳು ನಂಬಲು ಸಿದ್ಧರಿರಲಿಲ್ಲ. ಪೇರಾಂಬ್ರ ಎಂಬ ಊರಿನಲ್ಲಿ ನಿತಿನ್ ಅಂತ್ಯಕ್ರಿಯೆ ನಡೆದಾಗ ಕಾನೂನಿನಂತೆ ಹೆಚ್ಚು ಜನ ಸೇರಲಿಲ್ಲ. ಆದರೆ ಕೇರಳಕ್ಕೆ ಕೇರಳವೇ ಎಂಬಂತೆ ಎಲ್ಲಾ ಮನೆಗಳಲ್ಲಿ ನಿತಿನ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿ ದರು. ಮಮ್ಮಲ ಮರುಗಿದರು. ಅತಿರಾ ತನ್ನ ಕಂದನೊಂದಿಗೆ ಶೋಕಸಾಗರದಲ್ಲಿ ಮುಳುಗಿದಳು. ಯಾರನ್ನು ದೂಷಿಸುವುದೆಂದು ತಿಳಿಯದೆ !