ಮಡಿಕೇರಿ, ಜೂ. 12: ಕರ್ನಾಟಕ ಡಿ.ಎಸ್.ಎಸ್. ವತಿಯಿಂದ ಮಡಿಕೇರಿಯ ಕುಂಬಳಗೇರಿ, ಉಕ್ಕುಡದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಲ್ಲಿನ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿಯ ಪದವಿ ಕಾಲೇಜಿನ ಪ್ರಾಧ್ಯಾಪಕಿ ನಿರ್ಮಲಾ, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್., ಡಿಎಸ್‍ಎಸ್ ತಾಲೂಕು ಸಂಚಾಲಕ ದೀಪಕ್ ಎ.ಪಿ., ಡಿಎಸ್‍ಎಸ್ ಕುಂಬಳಗೇರಿ ಶಾಖೆಯ ಉಪಾಧ್ಯಕ್ಷ ದೇವೇಂದ್ರ ಹಾಜರಿದ್ದರು.

ಮುಖ್ಯ ಅತಿಥಿಗಳಾದ ನಿರ್ಮಲಾ ಅವರು ಡಿ.ಎಸ್.ಎಸ್. ಕಾರ್ಯವೈಖರಿಯ ಕುರಿತು ಪ್ರಶಂಶಿಸಿದ್ದಲ್ಲದೆ, ಕೊರೊನಾ ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಬಹಳ ಮುಖ್ಯ ಎಂದು ಹೇಳಿದರು. ಜಿಲ್ಲಾ ಸಂಚಾಲಕ ದಿವಾಕರ್ ಮಾತನಾಡಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವವರಿಗೆ ನಮ್ಮಿಂದ ಸಾಧ್ಯವಾದ ಸಹಾಯ ನೀಡುತ್ತಿದ್ದೇವೆ. ಇದು ನಮ್ಮದೊಂದು ಅಳಿಲು ಸೇವೆ ಎಂದು ತಮ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ನುಡಿದರು. ನಂತರ ನೆರೆದಿದ್ದ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಡಿಎಸ್‍ಎಸ್ ಕುಂಬಳಗೇರಿ ಘಟಕ ಉಪಾಧ್ಯಕ್ಷ ದೇವೇಂದ್ರ ಡಿ.ಎಸ್.ಎಸ್.ನ ಸಾಮಾಜಿಕ ಕಳಕಳಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ದಿನಂಪ್ರತಿ ಕೆಲಸ ಮಾಡುವವರ ಸ್ಥಿತಿಗತಿ ಅರಿತು ಅವರಿಗೆ ಆಹಾರ ಕಿಟ್ ನೀಡಿರುವುದು ಬಹಳ ಸಂತೋಷದ ವಿಚಾರ ಎಂದು ಡಿಎಸ್‍ಎಸ್ ಅನ್ನು ಅಭಿನಂದಿಸಿದರು. ಡಿಎಸ್‍ಎಸ್ ತಾಲೂಕು ಸಂಚಾಲಕ ದೀಪಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.