ಮಡಿಕೇರಿ, ಜೂ. 12: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಸಮೃದ್ಧಿ ಮತ್ತು ಕಿರುಸಾಲ ಯೋಜನೆಯಡಿ ಅರ್ಹ ಮಹಿಳೆಯರು ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಬ್ಯಾಂಕ್ ಸಾಲ ಹಾಗೂ ನಿಗಮದ ಸಹಾಯ ಧನದೊಂದಿಗೆ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆಯಡಿ 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಅರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿಪಾರ್ಲರ್, ಟೈಲರಿಂಗ್, ವ್ಯಾಪಾರ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು 18 ರಿಂದ 55 ವರ್ಷ ವಯೋಮಿತಿಗೊಳಪಟ್ಟು ಬಡತನ ರೇಖೆಯ ಒಳಪಡುವ ಪಡಿತರ ಚೀಟಿ ಹೊಂದಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಅವಕಾಶವಿರುತ್ತದೆ.
18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ರೂ. 1 ಲಕ್ಷದಿಂದ ರೂ. 3 ಲಕ್ಷದವರೆಗೆ ಹಾಗೂ ಶೇ. 50 ಸಹಾಯಧನ ನೀಡಲಾಗುವುದು ಮತ್ತು ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕೆ ಮೀರಬಾರದು. ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಿ.ಪಿ.ಎಲ್. ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ.
ಕಿರುಸಾಲ ಯೋಜನೆಯಡಿ ಪ.ಜಾತಿ ಮತ್ತು ಪ.ಪಂ. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರುಗಳಿಗೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ಗುಂಪಿಗೆ ರೂ. 2 ಲಕ್ಷಗಳನ್ನು ಬಡ್ಡಿ ರಹಿತ ಸಾಲವನ್ನಾಗಿ ನೀಡಲಾಗುವುದು.
ಬ್ಯಾಂಕ್ ಖಾತೆಯನ್ನು ಹೊಂದಿದ್ದು ಚಾಲ್ತಿಯಲ್ಲಿರಬೇಕು. ಗುಂಪು ಆರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಗರಿಷ್ಠ ರೂ. 2 ಲಕ್ಷಗಳಿಗೆ ಮೇಲ್ಪಟ್ಟಿರಬೇಕು. ಗುಂಪು ಒಂದು ಯೋಜನಾ ಘಟಕವನ್ನು ಸ್ಥಾಪಿಸಲು ಯೋಜನಾ ವರದಿಯನ್ನು ಹೊಂದಿರಬೇಕು. ತಾಲೂಕು ಮಟ್ಟದ ಸ್ತ್ರೀಶಕ್ತಿ ಒಕ್ಕೂಟದಲ್ಲಿ ನೋಂದಾವಣೆಯಾಗಿದ್ದು ರೂ. 250 ಶುಲ್ಕ ಪಾವತಿಸಿ ಸದಸ್ಯತ್ವ ಹೊಂದಿರಬೇಕು. ಸದಸ್ಯರೆಲ್ಲರೂ ರೂ. 50 ಛಾಪಾ ಕಾಗದದಲ್ಲಿ ಕರಾರು ಪತ್ರ. ಸ್ತ್ರೀಶಕ್ತಿ ಗುಂಪು ಗ್ರೇಡೀಂಗ್‍ಗೆ ಒಳಪಟ್ಟಿರಬೇಕು.
ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ರೂ. 10 ಸಾವಿರಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.
18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವರಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್. ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು.