ಸೋಮವಾರಪೇಟೆ, ಜೂ. 12: ಆರ್‍ಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೈಟೆಕ್ ಮಾರ್ಕೆಟ್‍ನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್‍ಗೆ ಮನವಿ ಮಾಡಿದ್ದಾರೆ.

ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಆರ್‍ಎಂಸಿ ಮಾರುಕಟ್ಟೆಯಲ್ಲಿ ವಾರದ ಸಂತೆ ನಡೆಯುತ್ತಿರುವದರಿಂದ ಸಾರ್ವಜನಿ ಕರಿಗೆ ಅನಾನುಕೂಲವಾಗುತ್ತಿದೆ. ಇದರೊಂದಿಗೆ ವಿವೇಕಾನಂದ ಸರ್ಕಲ್, ಆಲೇಕಟ್ಟೆ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕವಾಗು ತ್ತಿದ್ದು, ಪಾದಚಾರಿಗಳಿಗೂ ಸಮಸ್ಯೆ ಯಾಗುತ್ತಿದೆ ಎಂದು ವಿವರಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ವರ್ತಕರೂ ಸಹ ಸಮಸ್ಯೆ ಎದುರಿಸುತ್ತಿದ್ದು, ಪ.ಪಂ.ನ ಹೈಟೆಕ್ ಮಾರುಕಟ್ಟೆಯಲ್ಲೇ ವಾರದ ಸಂತೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದರೊಂದಿಗೆ ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಸಂಚಾರ ಅವ್ಯವಸ್ಥೆ ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಮಾರ್ಗಸೂಚಿ ಅಳವಡಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.

ಈ ಹಿಂದೆ ಇದ್ದಂತೆ ಸಂತೆ ದಿನವಾದ ಸೋಮವಾರದಂದು ಕ್ಲಬ್‍ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಕ್ರಮ ಕೈಗೊಳ್ಳುವದರೊಂದಿಗೆ, ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಬೇಕೆಂದು ಸಮಿತಿಯ ಸಂಚಾಲಕ ಎಸ್.ಮಹೇಶ್ ಮನವಿ ಮಾಡಿದರು. ಈ ಬಗ್ಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸ ಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು. ಈ ಸಂದರ್ಭ ಸಮಿತಿಯ ಕಾರ್ಯದರ್ಶಿ ಕೆ.ಎಲ್. ದೀಪಕ್, ಪದಾಧಿಕಾರಿ ಅಭಿಷೇಕ್ ಉಪಸ್ಥಿತರಿದ್ದರು.