ಮಡಿಕೇರಿ, ಜೂ. 12: ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವ್ಯವಸ್ಥೆಯು ಡಿಜಿಟಲ್, ಆನ್‍ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಮನೆಮನೆಗೆ ತಲುಪಿಸಲು ಮುಂದಾಗಿದೆ. ಇತರ ಬ್ಯಾಂಕ್ ಖಾತೆಗಳಿಗೆ ಹಾಗೂ ಖಾತೆಗಳಿಂದ ತಕ್ಷಣ ಹಣ ವರ್ಗಾವಣೆ, ನೆಫ್ಟ್ ಮೊಬೈಲ್ ರೀಚಾರ್ಜ್, ಆನ್‍ಲೈನ್ ಮೂಲಕ ಅಂಚೆ ಕಚೇರಿಯ ಆರ್.ಡಿ., ಸುಕನ್ಯ ಸಮೃದ್ಧಿ ಖಾತೆ, ಫಿ.ಫಿ.ಎಫ್. ಖಾತೆಗಳಿಗೆ ಹಣ ಜಮೆ ಮಾಡುವುದು. ಹೀಗೆ ಹಲವು ಅನುಕೂಲಗಳು ಇದರಲ್ಲಿವೆ.
ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ, ವಿಶೇಷಚೇತನ ವೇತನ, ಸರ್ಕಾರದ ಸ್ಕಾಲರ್‍ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಿಡಿ ಹೀಗೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು ಪಡೆಯಲು ಈ ಖಾತೆಯನ್ನು ಬಳಸಬಹುದಾಗಿದೆ.
ಖಾತೆ ಮಾಡಿಸುವುದು ಹೇಗೆ? ಐಪಿಪಿಬಿ ಖಾತೆ ಮಾಡಿಸಲು ಸಾರ್ವಜನಿಕರು ಆಧಾರ್ ಸಂಖ್ಯೆ, ಮೊಬೈಲ್ ಹಾಗೂ ರೂ. 100 ಗಳೊಂದಿಗೆ ಸಮೀಪದ ಅಂಚೆ ಕಚೇರಿಗೆ ಹೋಗಬಹುದು ಅಥವಾ ನಿಮ್ಮ ಮನೆಗಳಿಗೆ ಪತ್ರ ತಲುಪಿಸುವ ಪೋಸ್ಟ್‍ಮ್ಯಾನ್ ಅವರನ್ನು ಐಪಿಪಿಬಿ ಖಾತೆ ತೆರೆಯಲು ಭೇಟಿಯಾಗಬಹುದು.
ಕೊಡಗು ವಿಭಾಗದ ಸಾರ್ವಜನಿಕರು ತಾ. 13 ಮತ್ತು 27 ರಂದು ಆಯೋಜಿಸಲಾಗಿರುವ ಐಪಿಪಿಬಿ ಮಹಾಮೇಳದಲ್ಲಿ ಈ ಖಾತೆಯನ್ನು ವಿಶೇಷವಾಗಿ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಮೇಲೆ ತಿಳಿಸಿದ ದಿನಾಂಕದಂದು ನಡೆಯುವ ಐಪಿಪಿಬಿ ಮಹಾಮೇಳದಲ್ಲಿ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.