ಸೋಮವಾರಪೇಟೆ, ಜೂ.12: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ಕಾರ್ಮಿಕ ಮಹಿಳೆಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಅಪರಾಹ್ನ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ನಡೆದಿದೆ.ಮಾದಾಪುರ ನಿವಾಸಿ ವಾಸು ಎಂಬವರ ಪತ್ನಿ ಪಾರ್ವತಿ (48) ಎಂಬವರೇ ಮೃತ ಪಟ್ಟವರು. ಪಾರ್ವತಿ ಅವರು ಇತರ ಕೆಲಸಗಾರರೊಂದಿಗೆ ಗರ್ವಾಲೆ ಗ್ರಾಮದ ಪಾಸುರ ಕುಂಞಪ್ಪ ಎಂಬವರ ತೋಟದಲ್ಲಿ ಕಾಫಿ ಗಿಡಗಳ ಚಿಗುರು (ಮೊದಲ ಪುಟದಿಂದ) ತೆಗೆಯುವ ಕೆಲಸ ಮಾಡುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.ಕುಂಞಪ್ಪ ಅವರ ತೋಟಕ್ಕೆ ಒತ್ತಿಕೊಂಡಂತೆ ಇರುವ ಮೋದೂರು ಎಸ್ಟೇಟ್‍ನಲ್ಲಿದ್ದ ಒಣಗಿದ ಮರ, ಜೋರಾದ ಗಾಳಿ- ಮಳೆಗೆ ಅಪರಾಹ್ನ 3 ಗಂಟೆ ಸುಮಾರಿಗೆ ಧರಾಶಾಹಿಯಾಗಿದ್ದು, ಅದರ ಕೊಂಬೆಯೊಂದು ಪಾರ್ವತಿಯವರ ಮೇಲೆ ಬಿದ್ದಿದೆ. ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತಕ್ಷಣ ಗಾಯಾಳುವನ್ನು ಮಡಿಕೇರಿಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಆಸ್ಪತ್ರೆಯಲ್ಲಿ ಪಾರ್ವತಿ ಅವರನ್ನು ಪರೀಕ್ಷಿಸಿದ ವೈದ್ಯರು, ಅದಾಗಲೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಮೃತೆ ಪಾರ್ವತಿ ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.