ಮಡಿಕೇರಿ, ಜೂ. 12: ಕಳೆದ ಮೇ ಹಾಗೂ ಪ್ರಸ್ತುತ ಜೂನ್ ತಿಂಗಳುಗಳಲ್ಲಿ ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಲ್ಲಿ, ಚುನಾಯಿತ ಪ್ರತಿನಿಧಿಗಳ ಆಳ್ವಿಕೆ ಕೊನೆಗೊಳ್ಳಲಿದೆ. ಜಾಗತಿಕ ಕೊರೊನಾ ಹರಡುವಿಕೆ ಆತಂಕದ ನಡುವೆ ಚುನಾವಣಾ ಆಯೋಗವು ಈಗಾಗಲೇ ಸರಕಾರದಿಂದ ಆಯಾ ಜಿಲ್ಲಾಡಳಿತದ ಮುಖಾಂತರ ವರದಿ ಪಡೆದು, ಈಗಿನ ಸನ್ನಿವೇಶದಲ್ಲಿ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು ಸಾಧ್ಯವಿಲ್ಲವೆಂದು ಪರಿಗಣಿಸಿ, ಈ ಪ್ರಕ್ರಿಯೆ ಮುಂದೂಡಿದೆ. ಹೀಗಾಗಿ ಮುಂದಿನ ಜುಲೈ ತಿಂಗಳ ಮೊದಲ ವಾರದಲ್ಲಿ ಕೊಡಗಿನ ಎಲ್ಲಾ 104 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಿಪ್ರಾಯ ನೀಡಿದ್ದಾರೆ.ಈಗಾಗಲೇ ಈ ಸಂಬಂಧ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಕುರಿತು, ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ; ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಸರಕಾರದಿಂದ ಇನ್ನಷ್ಟೇ ಅಧಿಕೃತ ಆದೇಶವು ಹೊರಬೀಳಬೇಕಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಆ ಬಳಿಕ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಒಟ್ಟು

(ಮೊದಲ ಪುಟದಿಂದ) 104 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಮಾರ್ನುಡಿದರು.

ಬೋಪಯ್ಯ ಸ್ಪಷ್ಟನೆ : ಈ ಸಂಬಂಧ ಮಾಜಿ ವಿಧಾನಸಭಾ ಅಧ್ಯಕ್ಷರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿಕ್ರಿಯಿಸಿ, ಈ ಮೊದಲು ಗ್ರಾ.ಪಂ. ಆಡಳಿತ ಮುಗಿಯಲಿರುವ ವೇಳೆ, ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಸಂಬಂಧ ಸಾರ್ವಜನಿಕ ವಲಯದ ಸಲಹಾ ಸಮಿತಿ ಪ್ರಸ್ತಾವನೆಯನ್ನು ಸರಕಾರ ಕೈಬಿಟ್ಟಿದೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ತನಕ ನೇಮಕ : ಹೀಗಾಗಿ ಮುಂದೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ನೂತನ ವ್ಯವಸ್ಥೆ ಜಾರಿಗೊಳ್ಳುವ ತನಕ ಎಲ್ಲಾ ಗ್ರಾ.ಪಂ. ವ್ಯವಹಾರಗಳನ್ನು ಆಡಳಿತಾಧಿಕಾರಿಗಳೇ ನೋಡಿಕೊಳ್ಳಲಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರಲ್ಲದೆ, ಸರಕಾರ ಈಗಷ್ಟೇ ಸಂಪುಟ ಸಭೆಯ ನಿರ್ಧಾರ ಪ್ರಕಟಿಸಿದೆ ಎಂದು ನೆನಪಿಸಿದರು.

ಆದೇಶ ಬಂದಿಲ್ಲ : ಕೊಡಗು ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಸರಕಾರದಿಂದ ಯಾವದೇ ಆದೇಶ ಪತ್ರ ಬಂದಿಲ್ಲ ಎಂದು ನುಡಿದರು. ಅಲ್ಲದೆ ಈ ಸಂಬಂಧ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.