ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ
ಬೆಂಗಳೂರು, ಜೂ. 12: ರಾಜ್ಯಸಭಾ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಹೇಳಿದ್ದಾರೆ. ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ವಾಪಸ್ ಪಡೆಯುವ ಅವಧಿ ಇಂದು ಸಂಜೆ ಮುಗಿದ ಹಿನ್ನೆಲೆ ನಾಲ್ಕು ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿದೆ. ಅವಿರೋಧವಾಗಿ ಆಯ್ಕೆಯಾದ ಅಧಿಕೃತ ಘೋಷಣಾ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅಭ್ಯರ್ಥಿಗಳಾದ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅವರು ಪಡೆದುಕೊಂಡಿದ್ದಾರೆ.
ಕೊರೊನಾಗೆ ಒಂದೇ ದಿನ 7 ಬಲಿ
ಬೆಂಗಳೂರು, ಜೂ. 12: ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ ಏಳು ಮಂದಿ ಮಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್‍ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು, ಕಲಬುರಗಿಯಲ್ಲಿ ಇಬ್ಬರು ಹಾಗೂ ಹಾಸನದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಹೊಸದಾಗಿ 271 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಗುರುವಾರ 464 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 3440ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2995 ಸಕ್ರಿಯ ಪ್ರಕರಣಗಳಿದ್ದು, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಪತ್ತೆಯಾದ 271 ಸೋಂಕಿತರ ಪೈಕಿ 92 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 14 ಮಂದಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಬಳ್ಳಾರಿ 97, ಬೆಂಗಳೂರು 36, ಉಡುಪಿ 22, ಕಲಬುರ್ಗಿ 20, ಧಾರವಾಡ 19, ದಕ್ಷಿಣ ಕನ್ನಡ 17, ಬೀದರ್ 10, ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ, ವಿಜಯಪುರ, ಯಾದಗಿರಿಯಲ್ಲಿ ತಲಾ ಒಂದು ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಪದಗ್ರಹಣಕ್ಕೆ ದೇವರ ಮೊರೆ ಹೋದ ಡಿಕೆಶಿ
ಬೆಂಗಳೂರು, ಜೂ. 12: ಕೆಪಿಸಿಸಿ ಅಧ್ಯಕ್ಷರಾದರೂ ಹೈಕಮಾಂಡ್ ಅಧ್ಯಕ್ಷಗಿರಿಗೆ ಹಸಿರು ನಿಶಾನೆ ತೋರಿಸಿದ್ದರೂ ಸಹ ಡಿ.ಕೆ. ಶಿವಕುಮಾರ್‍ಗೆ ಅಧಿಕೃತವಾಗಿ ಪದಗ್ರಹಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೂರು ಬಾರಿ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದರೂ ಸಹ ಒಂದಲ್ಲ ಒಂದು ಕಾರಣಕ್ಕಾಗಿ ಅದು ಮುಂದೂಡಲ್ಪಟ್ಟಿದೆ. ಈಗ ತಾ. 14 ರ ಕಾರ್ಯಕ್ರಮವೂ ಮುಂದೂಡಿಕೆಯಾಗಿದೆ. ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಎದುರಾಗಿರುವ ಅಡೆತಡೆ ನಿವಾರಣೆಗೆ ಡಿ.ಕೆ. ಶಿವಕುಮಾರ್ ದೇವರ ಮೊರೆ ಹೋಗಲಿದ್ದಾರೆ. ತುಮಕೂರಿನ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯನ ಸಲಹೆಯಂತೆ ಶಿವನ ದರ್ಶನ ಪಡೆಯಲು ಮುಂದಾಗಿದ್ದಾರೆ. ಇದೇ ಭಾನುವಾರ ತಮಿಳುನಾಡಿನ ಪ್ರಸಿದ್ಧ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಶಿವಕುಮಾರ್, ಕುಟುಂಬ ಸಮೇತರಾಗಿ ವಿಘ್ನಗಳೆಲ್ಲ ನಿವಾರಣೆಯಾಗಲಿ ಎಂದು ಪ್ರಾರ್ಥಿಸಲಿದ್ದಾರೆ.
ಆಶಾ ಕಾರ್ಯಕರ್ತೆಯರಿಗೂ ಸಹಕಾರ ಸಾಲ
ದಾವಣಗೆರೆ, ಜೂ. 12: ಶೀಘ್ರದಲ್ಲಿ ಆಶಾ ಕಾರ್ಯಕರ್ತೆಯರಿಗೂ ಸಹಕಾರ ಇಲಾಖೆ ವತಿಯಿಂದ ಸಾಲ ಕೊಡಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಕೋವಿಡ್-19 ವಿರುದ್ಧ ಹೋರಾಡಿದ ಆಶಾ ಕಾರ್ಯಕರ್ತೆ ಯರಿಗೆ ಸರ್ಕಾರದಿಂದ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಲಾಗಿದೆ ಎಂದು ಕೊರೋನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ ರೂ. 53 ಕೋಟಿ ಸಂಗ್ರಹಿಸಿ ನೀಡಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ ಪೆÇ್ರೀತ್ಸಾಹಧನ ಕೊಡುವ ವಿಚಾರದಲ್ಲೂ ಮುಖ್ಯಮಂತ್ರಿಗಳಿಗೆ ಸಹಕಾರ ನೀಡಿದ್ದೇವೆ ಎಂದರು.
ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ
ಬೆಂಗಳೂರು, ಜೂ. 12: ಭೂಮಿ ಮಾರಾಟದ ಮೇಲಿನ ನಿರ್ಬಂಧ ಸಡಿಲಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ 79ಎ 79 ಬಿ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಶೇಷಾಜ್ಞೆಗೆ ಒಪ್ಪಿಗೆ ಪಡೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮುಖೇನ ಜಾರಿಗೊಳಿಸಲು ನಿರ್ಧರಿಸಿದ್ದು, ವಿಶೇಷಾಜ್ಞೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು ಎಂದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಸದ್ಯಕ್ಕೆ ನಡೆಯುವುದು ಅನುಮಾನ. ಹಾಗಾಗಿ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುವುದು. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಿಸಿಬಿ ಕಚೇರಿ 3 ದಿನ ಸೀಲ್‍ಡೌನ್
ಬೆಂಗಳೂರು, ಜೂ. 12: ಕೇಂದ್ರ ಅಪರಾಧ ತನಿಖಾ ವಿಭಾಗದ ವಶದಲ್ಲಿದ್ದ ಆರೋಪಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ನಗರದ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಪೆÇಲೀಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನ 3 ದಿನಗಳ ಕಾಲ ಸೀಲ್‍ಡೌನ್ ಆಗಿದೆ. ಬಿಬಿಎಂಪಿ ಸಿಬ್ಬಂದಿಗಳು ಸಿಸಿಬಿ ಕಚೇರಿಯನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಿದ್ದಾರೆ. ಇದೇ ವೇಳೆ ಬ್ಬರು ಇನ್ಸ್ಪೆಕ್ಟರ್ ಸೇರಿ 20 ಮಂದಿ ಕ್ವಾರಂಟೀನ್‍ನಲ್ಲಿರಿಸಲಾಗಿದೆ. ಓಲಾ ಸಂಸ್ಥೆಗೆ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇದೇ ಕಾರಣದಿಂದ ಸಿಸಿಬಿ ಕಚೇರಿ ಸೀಲ್‍ಡೌನ್ ಆಗಿದೆ.
ನೇಪಾಳ ಸೇನೆಯಿಂದ ಗುಂಡಿನ ದಾಳಿ
ಸೀತಾಮರಿ, ಜೂ. 12: ಬಿಹಾರದ ಸೀತಾಮರಿ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೀಮಾ ಸುರಕ್ಷಾ ಬಲ (ಎಸ್‍ಎಸ್‍ಬಿ) ಖಚಿತಪಡಿಸಿದೆ. ಈ ಗುಂಡಿನ ದಾಳಿಗೆ ಸಂಬಂಧಿಸಿದಂತೆ ನಾವು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ. ನಾವು ಎಲ್ಲವನ್ನೂ ನಿರ್ವಹಿಸುತ್ತಿದ್ದೇವೆ ಎಂದು ಎಸ್‍ಎಸ್‍ಬಿ ಮಹಾ ನಿರ್ದೇಶಕ ಸಂಜಯ್ ಕುಮಾರ್ ಅವರು ತಿಳಿಸಿದ್ದಾರೆ. ಲಾಲ್ ಬಂಡಿ ಪ್ರದೇಶದ ಸೋನಬರ್ಸಾ ಪೆÇಲೀಸ್ ಠಾಣಾ ವ್ಯಾಪ್ತಿಯ ಜಾನಕಿ ನಗರ ಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.