ಗೋಣಿಕೊಪ್ಪಲು, ಜೂ. 12: ರೈತರು ಸಣ್ಣ ಪ್ರಮಾಣದಲ್ಲಿ ಬೆಳೆಯುವ ತರಕಾರಿ, ಹಣ್ಣು, ಸೇರಿದಂತೆ ಇನ್ನಿತರ ಬೆಳೆಗಳಿಗೆ ತಾವಾಗಿಯೇ ಮಾರುಕಟ್ಟೆ ಸೃಷಿಸಿಕೊಳ್ಳುವ ಮೂಲಕ ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿ ಪಡಿಸಿಕೊಂಡಲ್ಲಿ ರೈತರು ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ರೈತರಿಗೆ ಕರೆ ನೀಡಿದರು.
ಪೊನ್ನಂಪೇಟೆ ಸಮೀಪದ ಕುಂದ, ಮುಗುಟಗೇರಿ ಗ್ರಾಮದ ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತ ಸಂವಾದ ಹಾಗೂ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಇಂದು ಕೇವಲ ಕಾಫಿ, ಕರಿಮೆಣಸು, ಇಷ್ಟಕ್ಕೆ ಸೀಮಿತಗೊಳ್ಳದೆ ಸಂದರ್ಭಕ್ಕ ನುಗುಣವಾಗಿ ತರಕಾರಿ, ಹಣ್ಣು ಹಂಪಲು ಬೆಳೆಯುತ್ತಿದ್ದಾರೆ. ಆದರೆ ಬೆಳೆ ಬೆಳೆದ ರೈತ ಇದನ್ನು ದಲ್ಲಾಳಿ ಮೂಲಕ ವ್ಯಾಪಾರ ನಡೆಸದೆ ತಾವೇ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಲ್ಲಿ ಉತ್ತಮ ಬೆಲೆ ಸಿಗಲಿದೆ. ಇದರಿಂದ ಗ್ರಾಹಕನಿಗೂ ಗುಣಮಟ್ಟದ ಪದಾರ್ಥಗಳು ತಲುಪಲಿವೆ ಎಂದರು.
ಗ್ರಾಮದ ಹಿರಿಯ ರೈತ ಮುಖಂಡ ಸಣ್ಣುವಂಡ ಪೂಣಚ್ಚ ಮಾತನಾಡಿ; ಗ್ರಾಮದಲ್ಲಿ ವಿದ್ಯುತ್,ರಸ್ತೆ, ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗೆ ಪರಿಹಾರ ಸಿಗಬೇಕಿದೆ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ರೈತ ಸಂಘದ ಅಸ್ತಿತ್ವ ಗ್ರಾಮಕ್ಕೆ ಅವಶ್ಯಕತೆಯಿ ರುವುದರಿಂದ ಗ್ರಾಮದ ಹಿರಿಯ ಹಾಗೂ ಕಿರಿಯ ರೈತರು ರೈತ ಸಂಘಕ್ಕೆ ಸೇರ್ಪಡೆಯಾಗಿದ್ದಾರೆ.ಈ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಲಭಿಸುವ ಆಶಾಭಾವನೆ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ ರೈತ ಸಂಘಕ್ಕೆ ತನ್ನದೆ ಆದ ಕಟ್ಟುಪಾಡುಗಳಿದ್ದು ಇವುಗಳನ್ನು ಮೀರಿ ಯಾರೂ ನಡೆದುಕೊಳ್ಳ ಬಾರದು. ಹಸಿರು ಶಾಲಿಗಿರುವ ಗೌರವನ್ನು ಎಲ್ಲರೂ ಎತ್ತಿ ಹಿಡಿಯಬೇಕು. ಗ್ರಾಮದ ಯಾವುದೇ ಸಮಸ್ಯೆಗಳಿದ್ದಲ್ಲಿ ಇವುಗಳನ್ನು ಬಗೆ ಹರಿಸಲು ರೈತ ಸಂಘ ಸದಾ ಬದ್ಧವಿದೆ ಎಂದರು. ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ರೈತ ಸಂಘ ಬೆಳೆದು ಬಂದ ಹಾದಿಯ ಬಗ್ಗೆ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಕುಂದ, ಮುಗುಟಗೇರಿ, ಈಚೂರು ಗ್ರಾಮದ ರೈತ ಮುಖಂಡರಾದ ಅಡ್ಡಂಡ ಜಾಲಿ, ಪಟ್ರಂಗಡ ಅಯ್ಯಪ್ಪ, ತೀತಮಾಡ ಕುಶಾಲಪ್ಪ, ಗುಮ್ಮಟ್ಟೀರ ಪೂಣಚ್ಚ, ತೀತಮಾಡ ಗಣಪತಿ, ತೀತಮಾಡ ಶರಣು, ಪೆಮ್ಮಂಡ ಉಮೇಶ್, ಸಣ್ಣುವಂಡ ದರ್ಶನ್, ತೀತಮಾಡ ಗಣಪತಿ, ತೀತರಮಾಡ ಸುನೀಲ್, ಬಿ.ಎಸ್. ಚಂದ್ರಶೇಖರ್, ಸೇರಿದಂತೆ ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು. ಈಚೂರು, ಕುಂದ, ಮುಗುಟಗೇರಿ ಗ್ರಾಮದ ಸಂಚಾಲಕರು ಗಳಾಗಿ ಸಣ್ಣುವಂಡ ಪೂಣಚ್ಚ, ತೀತಮಾಡ ಎಂ.ಶರಣು, ಮಂಜುವಂಡ ಎನ್.ಅರುಣ್, ಈ ಸಂದರ್ಭ ಆಯ್ಕೆ ಮಾಡಲಾಯಿತು. ವಿವಿಧ ಗ್ರಾಮದ ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ರೈತ ಮುಖಂಡರಾದ ಸಣ್ಣುವಂಡ ಪೂಣಚ್ಚ ಸ್ವಾಗತಿಸಿ, ತೀತಮಾಡ ಗಣಪತಿ ವಂದಿಸಿದರು.