ಗೋಣಿಕೊಪ್ಪಲು.ಜೂ.12: ದ.ಕೊಡಗಿನ ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ನೋಕ್ಯ ಗ್ರಾಮದಲ್ಲಿ ಹಾಡಹಗಲೇ ಕಾಣಿಸಿಕೊಂಡ ಒಂಟಿ ಸಲಗ ಇಲ್ಲಿನ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಶುಕ್ರವಾರ ಮುಂಜಾನೆಯಿಂದಲೇ ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೋಕ್ಯ ಗ್ರಾಮದ ಎಡತೊರೆ ಬಳಿಯ ಚೆಪ್ಪುಡೀರ ಕುಟುಂಬದ ಪಾಳು ಬಿದ್ದ ಗದ್ದೆಯಲ್ಲಿ ಒಂಟಿ ಸಲಗ ಸೇರಿಕೊಂಡಿದ್ದು ಒಂದೇ ಸಮನೆ ಘೀಳಿಡುತ್ತ ಇಲ್ಲಿಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಸಮೀಪದ ಕುಂಞರಾಮ ಕಟ್ಟೆಯ ಬಳಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಕೂಗಳತೆಯ ಅಂತರದಿಂದ ಒಂಟಿ ಸಲಗದಿಂದ ಪಾರಾಗಿದ್ದಾರೆ. ಒಂಟಿ ಸಲಗವು ಕೃಷ್ಣ ಬಲರಾಮ ದೇವಸ್ಥಾನದ ಬಳಿ ಸುತ್ತಾಡುತ್ತಿದ್ದು ಭಯದ ವಾತಾವರಣ ಸೃಷ್ಟಿಸಿದೆ. ಇತ್ತ ಯಾರೂ ಕೂಡ ಓಡಾಟ ನಡೆಸದಂತೆ ಸ್ಥಳೀಯ ಗ್ರಾಮಸ್ಥರೆ ಎಚ್ಚರಿಕೆ ನೀಡುವ ಕೆಲಸ ನಿರ್ವಹಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡು ಗ್ರಾಮದ ಜನತೆಯ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಸಂಜೆ ಮೂರು ಗಂಟೆಯವರೆಗೂ ಈ ಭಾಗದಲ್ಲೇ ಮದವೇರಿದ ಒಂಟಿ ಸಲಗವು ಸುತ್ತಾಟ ನಡೆಸಿದೆ. ಅರಣ್ಯ ಪ್ರದೇಶಕ್ಕೆ ತೆರಳಲು ಈ ಒಂಟಿ ಸಲಗಕ್ಕೆ ಸಾಧ್ಯವಾಗುತ್ತಿಲ್ಲ.
ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿರುವ ಈ ಒಂಟಿ ಸಲಗವು ರೈಲ್ವೆ ಬ್ಯಾರೀಕೇಡ್ ಮೂಲಕ ದಾಟಲು ಸಾಧ್ಯವಾಗದೆ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯ ಆರ್‍ಆರ್‍ಟಿ ತಂಡ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ನಡೆಸಿದರಾದರೂ ಯಾರೂ ಕೂಡ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಮಧ್ಯಾಹ್ನದ ವೇಳೆ ಕೆಲವು ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿದರಾದರೂ ಕೋರ್ಟ್ ಕೆಲಸದ ನಿಮಿತ್ತ ತೆರಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವು ಅರಣ್ಯ ಇಲಾಖೆಯ ಸಿಬ್ಬಂದಿಗಳು ಒಂಟಿ ಸಲಗವಿರುವ ಸ್ಥಳಕ್ಕೆ ಭೇಟಿ ನೀಡಿದರಾದರೂ ಒಂಟಿ ಸಲಗವನ್ನು ಓಡಿಸಲಾಗದೆ ಸುಮ್ಮನಾಗಿದ್ದಾರೆ. ಒಂಟಿ ಸಲಗವು ಮದವೇರಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಓಡಾಡುತ್ತಿದ್ದು ಈ ಭಾಗದ ಕಾರ್ಮಿಕರು ಕೆಲಸ ನಿಲ್ಲಿಸಿ ಮನೆಯತ್ತ ತೆರಳಿದ್ದಾರೆ.
-ಹೆಚ್.ಕೆ.ಜಗದೀಶ್