ವೀರಾಜಪೇಟೆ, ಜೂ. 12 : ಪೆರುಂಬಾಡಿಯಿಂದ ವೀರಾಜಪೇಟೆಗೆ ಬರುತ್ತಿದ್ದ ಎರಡು ಬೈಕ್‍ಗಳನ್ನು ನಗರ ಪೊಲೀಸರು ಇಲ್ಲಿನ ಮೀನುಪೇಟೆಯ ಕೀರ್ತಿ ಹೊಟೇಲ್ ಬಳಿ ಶೋಧಿಸಿದಾಗ ರೂ 30,000 ಮೌಲ್ಯದ ಸುಮಾರು 900 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಗಾಂಜಾ ಹಾಗೂ ಬೈಕ್‍ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.ಆಟೋ ಚಾಲಕ ಹಾಗೂ ಒಂದನೇ ಪೆರುಂಬಾಡಿಯ ನಿವಾಸಿ ಎಸ್.ಷಂಶುದ್ದೀನ್ (30) ಹಾಗೂ ಗುಂಡಿಗೆರೆ ಗ್ರಾಮದ ಕೆ.ಎಂ.ಶಫೀಕ್ (28) ಇಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಎರಡು ಬೈಕ್‍ಗಳಲ್ಲಿ ವೀರಾಜಪೇಟೆಗೆ ಬರುತ್ತಿದ್ದಾಗ ಗ್ರಾಮಸ್ತರು ಪೊಲೀಸರಿಗೆ ನೀಡಿದ ಸುಳಿವಿನ ಮೇರೆ ಪೊಲೀಸರು ಬೈಕ್‍ನಲ್ಲಿದ್ದ ಬ್ಯಾಗ್‍ಗಳನ್ನು ಶೋಧಿಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದೆ. ಈ ಇಬ್ಬರು ನಿರಂತರವಾಗಿ ಗಾಂಜಾ ದಂಧೆ ಮಾಡುತ್ತಿದ್ದು ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಷಂಶುದ್ದೀನ್‍ನ ಮೇಲೆ ಎರಡು ಗಾಂಜಾ (ಮೊದಲ ಪುಟದಿಂದ) ಪ್ರಕರಣಗಳು, ಶಫೀಕ್ ಮೇಲೆ ಒಂದು ಗಾಂಜಾ ಪ್ರಕರಣವಿದ್ದು ಸಮುಚ್ಚಯ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿದೆ.
ಈ ಇಬ್ಬರು ಮೈಸೂರಿನಿಂದ ಗಾಂಜಾವನ್ನು ಖರೀದಿಸಿ ಇಲ್ಲಿನ ಗಾಂಜಾ ವ್ಯಾಪಾರಿಗಳಿಗೆ ವಿತರಿಸುತ್ತಿದ್ದ ರೆಂದೂ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಪೊಲೀಸರು ಗಾಂಜಾ ಅಕ್ರಮ ಸಾಗಾಟಕ್ಕೆ ಬಳಸಿದ (ಕೆ.ಎ.14 ಜಿ 9618) ಹಾಗೂ (ಕೆ.ಎಲ್.58 ಡಿ 7768) ಬೈಕ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರ ಮಾರ್ಗದರ್ಶನದ ಮೇರೆ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ, ಲೋಕೇಶ್, ಗಿರೀಶ್, ಸಂತೋಷ್ ಹಾಗೂ ಯೋಗೀಶ್ ಎರಡು ಬೈಕ್‍ಗಳ ಮೇಲೆ ದಾಳಿ ನಡೆಸಿದ್ದರು.