ಸೋಮವಾರಪೇಟೆ,ಜೂ.11: ತಾಲೂಕಿನ ಶಾಂತಳ್ಳಿ ಮೂಲಕ ನೆರೆಯ ಹಾಸನ ಜಿಲ್ಲೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ, ಇಲ್ಲಿಗೆ ಸಮೀಪದ ಪಟ್ಟಣಕೊಲ್ಲಿ ಎಂಬಲ್ಲಿ ಕುಸಿಯುವ ಭೀತಿ ಎದುರಾಗಿದೆ.

ಜಿಲ್ಲೆಯ ಗಡಿ ಭಾಗವಾದ ಸಕಲೇಶ ಪುರ ಸಂಪರ್ಕಿಸುವ ಶಾಂತಳ್ಳಿ ಬಳಿಯ ಪಟ್ಟಣಕೊಲ್ಲಿ ರಸ್ತೆ ಬದಿಯು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೆಲ ತಿಂಗಳ ಹಿಂದೆ ಈ ಸ್ಥಳದಲ್ಲಿ ಟಿಪ್ಪರ್ ವಾಹನ ವೊಂದು ಸರ್ಕಾರಿ ಬಸ್ಸಿಗೆ ಸ್ಥಳಾವಕಾಶ ಕಲ್ಪಿಸುವ ಸಂದರ್ಭ ರಸ್ತೆ ಬದಿ ಕುಸಿದು ಪ್ರಪಾತಕ್ಕೆ ಉರುಳಿ ಬಿದ್ದ ಘಟನೆಯೂ ನಡೆದಿತ್ತು. ಇದೇ ಸ್ಥಳದಲ್ಲಿ ಇದೀಗ ರಸ್ತೆಯಲ್ಲಿ ಬಿರುಕು ಮೂಡಿದ್ದು, ಮಳೆಗಾಲದಲ್ಲಿ ಭಾರೀ ವಾಹನಗಳು ಇಲ್ಲಿ ಚಲಿಸಿದರೆ ದುರಂತ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

ಈಗಾಗಲೇ ರಸ್ಥೆಯ ಮಧ್ಯ ಭಾಗದವರೆಗೂ ಬಿರುಕು ಉಂಟಾಗಿದ್ದು, ಮಳೆಯೊಂದಿಗೆ ವಾಹನಗಳು ಸಂಚರಿಸಿದರೆ ರಸ್ತೆ ಸಡಿಲಗೊಂಡು ವಾಹನಗಳು ಪ್ರಪಾತಕ್ಕೆ ಉರುಳುವದು ನಿಶ್ಚಿತವಾಗಿದೆ. ಒಂದು ವೇಳೆ ರಸ್ತೆ ಕುಸಿತಗೊಂಡರೆ ಸೋಮವಾರಪೇಟೆಯಿಂದ ಶಾಂತಳ್ಳಿ ,ಬೆಟ್ಟದಳ್ಳಿ , ಕುಂದಳ್ಳಿ, ಪುಷ್ಪಗಿರಿ, ಸಕಲೇಶಪುರ ಸಂಪರ್ಕ ಸ್ಥಗಿತಗೊಳ್ಳುವದರಲ್ಲಿ ಸಂಶಯವಿಲ್ಲ. ತಕ್ಷಣ ಲೋಕೋಪಯೋಗಿ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅವಘಡ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.