ಮಡಿಕೇರಿ, ಜೂ. 11: ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಮುಂಗಾರು ಮಳೆ ತೀವ್ರತೆ ನಡುವೆ ಆತಂಕಗೊಂಡಿರುವ ನೇಗಿಲಯೋಗಿ, ಪ್ರಸ್ತುತ ವರ್ಷದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಆಶಾದಾಯಕ ಮಳೆಗಾಗಿ ಪ್ರಾರ್ಥಿಸುತ್ತಾ, ಈ ಹಿಂದಿನ ವರ್ಷಗಳಂತೆ ವರುಣ ಆವಾಂತರ ಸೃಷ್ಟಿಸದಿರಲಿ ಎಂದು ಭಗವಂತನಿಗೆ ಮೊರೆಯಿಡುತ್ತಿದ್ದಾನೆ, ಈಗಾಗಲೇ ಅಗಡಿಗಳಲ್ಲಿ ಸಸಿಮಡಿ ತಯಾರಿಯೊಂದಿಗೆ ಗದ್ದೆಗಳ ಉಳುಮೆಯಲ್ಲಿ ತೊಡಗಿರುವ ರೈತರು, ಕೃಷಿ ಇಲಾಖೆಯ ತಂತ್ರಜ್ಞರ ಸಲಹೆಯೊಂದಿಗೆ ಬಿತ್ತನೆ ಬೀಜ, ಗೊಬ್ಬರ ಹೊಂದಿಕೊಳ್ಳಲು ಮುಂದಾಗಿದ್ದಾರೆ.ಸಾಕಷ್ಟು ಗ್ರಾಮೀಣ ರೈತರು 950 ಕ್ವಿಂಟಾಲ್ ಬಿತ್ತನೆ ಬೀಜ ಹೊಂದಿಕೊಂಡು ಸಸಿಮಡಿ ಸಿದ್ಧಗೊಳಿಸಿದ್ದರೆ, ಸುಮಾರು 23 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಹೊಂದಿಕೊಂಡು ಭವಿಷ್ಯದ ಬೆಳೆಗಾಗಿ ಗದ್ದೆಗಳನ್ನು ಅಣಿಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆಯ ಅನುಕೂಲಕ್ಕೆ ತಕ್ಕಂತೆ ಗದ್ದೆಗಳನ್ನು ಉಳುಮೆ ಮಾಡಿರುವ ಅನೇಕ ರೈತರು, ಸಸಿಮಡಿ ಸಿದ್ಧಗೊಂಡಿರುವ ಸಮಯದಲ್ಲಿ ನೀರಿನ ಕೊರತೆಯಿಂದ ನಾಟಿ ಮಾಡಲು ತೊಡಕಾಗಿರುವ ಪರಿಣಾಮ, ಮುಗಿಲಿನೆಡೆಗೆ ಚಿತ್ತ ನೆಟ್ಟಿದ್ದಾರೆ. ಬಹುತೇಕ ಗದ್ದೆಗಳಲ್ಲಿ ತೇವಾಂಶ ಹಾಗೂ ನೀರಿನ ಕೊರತೆ ಎದುರಾಗಿದ್ದರೆ, ಸಿದ್ಧಗೊಂಡಿರುವ ಸಸಿಮಡಿ ಪೈರು ತೆಗೆದು ನಾಟಿಗೆ ಪೂರಕ ವ್ಯವಸ್ಥೆಯಿಲ್ಲದೆ ಆತಂಕಗೊಂಡಿದ್ದಾರೆ.

ಇಲಾಖೆ ಮಾಹಿತಿ : ಕೊಡಗು ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕರ ಪ್ರಕಾರ, ಈ ವರ್ಷದ ಮುಂಗಾರುವಿನಲ್ಲಿ, ಕಳೆದ ಎರಡು ವರ್ಷಗಳಿಂದ ಭೂಕುಸಿತ ಹಾಗೂ ಜಲಪ್ರವಾಹದಿಂದಾಗಿ ಸಾಕಷ್ಟು ಕಡೆ ಕೃಷಿ ಭೂಮಿ ಹಾನಿಗೊಂಡಿದೆ. ಹೀಗಾಗಿ ಅಂತಹ ಜಮೀನು ಭತ್ತ ನಾಟಿಗೆ ಇನ್ನು ಅನುಕೂಲವಾಗಿಲ್ಲ, ಈ ನಡುವೆ ಕಿರಿದಾಗಿರುವ ಅನ್ನದಾತನ ಅಂಗಳ ಪ್ರಸ್ತುತ 30400 ಹೆಕ್ಟೇರ್‍ಗೆ ಸೀಮಿತಗೊಂಡಿದೆ. ಇನ್ನು ಬಯಲು ಸೀಮೆಯಲ್ಲಿ 4 ಸಾವಿರ ಹೆಕ್ಟೇರ್ ಜೋಳದ ಗುರಿ ಹೊಂದಲಾಗಿದೆ.

ಈ ಜಮೀನಿಗೆ ತಕ್ಕಂತೆ 2600 ಕ್ವಿಂಟಾಲ್ ಬಿತ್ತನೆ ಬೀಜ ಭತ್ತ ಬೆಳೆಗಾಗಿ ದಾಸ್ತಾನು ಮಾಡಲಾಗಿದೆ. ಈ ಭೂಮಿಗೆ ಪೂರಕವಾಗಿ 65 ಸಾವಿರ ಮೆಟ್ರಿಕ್ ಟನ್ ಗೊಬ್ಬರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈಗ ಜಿಲ್ಲೆಯ ಮಟ್ಟಿಗೆ 23 ಸಾವಿರ ಮೆಟ್ರಿಕ್ ಟನ್‍ನಷ್ಟು ದಾಸ್ತಾನು ಹೊಂದಲಾಗಿದೆ. ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಖಾಸಗಿಯಾಗಿಯೂ ರೈತರಿಗೆ ರಸಗೊಬ್ಬರ ಕಲ್ಪಿಸಲಾಗುತ್ತಿದೆ.

ಸಾಗಾಟ ಸಮಸ್ಯೆ : ಕೊರೊನಾ ಸೋಂಕಿನ ಆತಂಕದಿಂದ ಲಾಕ್‍ಡೌನ್ ನಡುವೆ ಒಂದಿಷ್ಟು ಸಮಯ ರೈತರು ಬಿತ್ತನೆಬೀಜ ಹಾಗೂ ಗೊಬ್ಬರ ಸಾಗಾಟ ಸಮಸ್ಯೆ ಎದುರಿಸಿದ್ದು, ಈಗ ಇಂತಹ ತೊಡಕು ನಿವಾರಣೆಯಾಗಿದೆ ಎಂದು ಜಿಲ್ಲಾ ಕೃಷಿ ಅಧಿಕಾರಿ ರಾಜು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಈಗಿನ ಸನ್ನಿವೇಶದಲ್ಲಿ ಗಾಳಿಬೀಡು ಹಾಗೂ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಇನ್ನೊಂದು ವಾರದಲ್ಲಿ ಭತ್ತದ ನಾಟಿಗೆ ಚಾಲನೆ ದೊರೆಯಲಿದ್ದು, ಪೂರ್ವ ಸಿದ್ಧತೆ ನಡೆದಿದೆ.

ಇನ್ನು ಬಯಲು ಸೀಮೆಯ ಕೂಡಿಗೆ, ಶಿರಂಗಾಲ, ಹೆಬ್ಬಾಲೆ ಸುತ್ತಮುತ್ತ ಹಾಗೂ ಹಾರಂಗಿ ಹಿನ್ನೀರು ಪ್ರದೇಶದ ಅಲ್ಲಲ್ಲಿ ಜೋಳ ಬಿತ್ತನೆಕೈಗೊಳ್ಳಲಾಗಿದೆ. ನೀರಾವರಿ ಜಮೀನುಗಳಲ್ಲಿ

(ಮೊದಲ ಪುಟದಿಂದ) ಉಳುಮೆಯೊಂದಿಗೆ ಈ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿ ಕೃಷಿ ಕಾಯಕಕ್ಕೆ ಸಿದ್ಧತೆ ಮುಂದುವರಿದಿರುವ ದೃಶ್ಯ ಕಂಡು ಬರುತ್ತಿದೆ.

ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯಲ್ಲಿ ನಿಗದಿಯಂತೆ ಮಳೆ ಸುರಿಯುತ್ತಿದ್ದು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಭತ್ತದ ಬಿತ್ತನೆಗಾಗಿ ರೈತರು ಅಣಿಯಾಗುತ್ತಿದ್ದಾರೆ. ಇಲ್ಲಿನ ತಣ್ಣಿಮಾನಿ ಗ್ರಾಮದ ರೈತ ಕುದುಪಜೆ ಜನಾರ್ಧನ ಅವರು ಭತ್ತದ ಬಿತ್ತನೆಯಲ್ಲಿ ತೊಡಗಿದ್ದಾರೆ. ಭಾಗಮಂಡಲ, ತಣ್ಣಿಮಾನಿ, ಚೆಟ್ಟಿಮಾನಿ, ಕೋರಂಗಾಲ ಮತ್ತಿತರ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಗದ್ದೆಯನ್ನು ಉಳುಮೆ ಮಾಡಿ ಹಸನು ಮಾಡಲಾಗಿದೆ. ಎತ್ತುಗಳನ್ನು ಬಳಸಿ ಸಾಂಪ್ರದಾಯಿಕವಾಗಿ ಉಳುಮೆ ಮಾಡಲಾಗುತ್ತಿದೆ. ಇದೀಗ ಬಿತ್ತನೆ ಕಾರ್ಯ ನಡೆಯುತ್ತಿದ್ದು ಒಂದು ತಿಂಗಳ ಬಳಿಕ ನಾಟಿ ಕಾರ್ಯ ಆರಂಭಗೊಳ್ಳಲಿದೆ. ಮಳೆ ಆಗಮನದೊಂದಿಗೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು ರೈತರು ಭತ್ತದ ಕೃಷಿಯತ್ತ ಉತ್ಸಾಹ ತೋರುತ್ತಿದ್ದಾರೆ.