ಮಡಿಕೇರಿ, ಜೂ. 10 : ಕಾಫಿ ಬೆಳೆಗಾರರು ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದು ಸರ್ಕಾರ ಕೂಡಲೇ ಬೆಳೆಗಾರರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಇಲ್ಲದೇ ಹೋದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಸ್ಧಗಿತಗೊಳಿಸುವ ಅನಿವಾರ್ಯತೆ ಕಾಫಿ ಬೆಳೆಗಾರರಿಗೆ ಬಂದೀತು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಎಚ್ಚರಿಸಿದೆ.ಪ್ರಸ್ತುತ ಕಾಫಿ ಉಧ್ಯಮವು ಹಲವು ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು ಇದನ್ನೇ ಆಶ್ರಯಿಸಿರುವ ಬೆಳೆಗಾರರ ಮತ್ತು ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಕೆಲ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರಕಲ್ಪಿಸಬೇಕಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ. ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಮುರಳೀಧರ ಬಕ್ಕರವಳ್ಳಿ ನೀಡಿರುವ ಹೇಳಿಕೆ ಇಂತಿದೆ. ಕಳೆದ 2 ವರ್ಷಗಳಿಂದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ 150 ವರ್ಷದಲ್ಲೇ ಅತೀ ಹೆಚ್ಚು ಅತೀವೃಷ್ಟಿ ಸಂಭವಿಸಿ, ಪ್ರವಾಹ ಮತ್ತು ಭೂ ಕುಸಿತಗಳು ಉಂಟಾಗಿ ಕಾಫಿ ಬೆಳೆಯಲ್ಲಿ ಶೇ. 35-70 ರಷ್ಟು ಬೆಳೆನಷ್ಟ ಸಂಭವಿಸಿದೆ. ಕಳೆದ 26 ವರ್ಷದ ಅಂದರೆ 1993ರ ಕಾಫಿ ಬೆಲೆಯಿದ್ದು ಕಾಫಿ ತೋಟಗಳ ನಿರ್ವಹಣಾ ವೆಚ್ಚವು ಗಗನಕ್ಕೇರಿದೆ.
ಕಳೆದ 5 ವರ್ಷದ ಕಾಫಿ ಬೆಲೆಯನ್ನು ಗಣನೆಗೆ ತೆಗೆದುಕೊಂಡರೆ ಸರಾಸರಿ ಅರೇಬಿಕಾ ಕಾಫಿಗೆ ಶೇ.38 ರಷ್ಟು ಹಾಗೂ ರೋಬಸ್ಟಾ ಕಾಫಿಗೆ ಶೇ. 8 ನಷ್ಟದಲ್ಲಿ ಬೆಲೆಯು ದೊರೆತಿರುವುದು ಕಾಫಿ ಬೆಳೆಗಾರರ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಕರ್ನಾಟಕ ಸರ್ಕಾರ 2018 ಏಪ್ರಿಲ್ 12 ರಿಂದ 5 ವರ್ಷಗಳ ಅವಧಿಗೆ ಪರಿಗಣಿಸಿ ಕಾಫಿ ಬೆಳೆಯುವ ಪ್ರದೇಶಗಳನ್ನು ಕೀಟ ಪೀಡಿತ ಪ್ರದೇಶವೆಂದು (ನಂಬರ್ಎ.ಜಿ.ಡಿ. 187 ಕಾಯ್ದೆ 2017) ರಲ್ಲಿ ಘೋಷಿಸಿ, ಕಾಫಿ ಮಂಡಳಿಗೆ ಶಿಫಾರಸ್ಸು ಮಾಡಿರುತ್ತದೆ. ಈ ಅಧಿಸೂಚನೆಯಲ್ಲಿ ಬಿಳಿಕಾಂಡ ಕೊರಕದ ರೋಗವು ಉಲ್ಬಣಿಸಿದ್ದು, ಇದರ ಪರಿಣಾಮ ಗಿಡಗಳು ನಾಶಹೊಂದಿ ಬೆಳೆಗಾರರ ಪ್ರತಿವರ್ಷ ಶೇ.30 ರಷ್ಟು ಮೂಲ ಬಂಡವಾಳವೂ ಸಹಾ ನಷ್ಟವಾಗಿದೆಯೆಂದು ತಿಳಿಸಲಾಗಿದೆ.
ಇದರೊಂದಿಗೆ ಬೆಳೆಗಾರರು ಅನುಭವಿಸುತ್ತಿರುವ ಇವರ ಸಂಕಷ್ಟಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.