ಮಡಿಕೇರಿ, ಜೂ. 10: ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪದಿಂದ ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ವಾಸಿಸುವುದು ಅಪಾಯಕಾರಿಯೆಂದು ಪರಿಗಣಿಸಿ, ಮಾದಾಪುರ ಬಳಿಯ ಜಂಬೂರುವಿನಲ್ಲಿ ಪುನರ್ವಸತಿಗಾಗಿ ಸರಕಾರದಿಂದ ಮನೆಗಳನ್ನು ಕಲ್ಪಿಸಲಾಗಿದೆ. ಆ ಬಳಿಕವೂ ಫಲಾನುಭವಿಗಳು ಅಪಾಯದ ಸ್ಥಳಗಳನ್ನು ತೊರೆಯದೆ ಅಲ್ಲೇ ಬಿಡಾರ ಹೂಡಿರುವುದು ಬಹಿರಂಗಗೊಂಡಿದೆ. ಜಿಲ್ಲಾಡಳಿತದ ಪ್ರಕಾರ ಸರಕಾರದಿಂದ ಪುನರ್ವಸತಿ ಘೋಷಿಸಿದ್ದರೂ, ಅಪಾಯ ಸಂಭವಿಸಿರುವ ಜಾಗದ ಬಗ್ಗೆ ನಿರ್ಧಿಷ್ಟ ಮಾರ್ಗಸೂಚಿ ಕಲ್ಪಿಸಿಲ್ಲ.

ಪರಿಣಾಮವಾಗಿ ಈ ಹಿಂದೆಯೂ ಆಶ್ರಯ ಯೋಜನೆಯಡಿ ಮನೆಗಳನ್ನು ಪಡೆದಿರುವ ಫಲಾನುಭವಿಗಳು, ಮತ್ತೆ ಮತ್ತೆ ತಮ್ಮ ಕುಟುಂಬದ ಬೇರೆ ಸದಸ್ಯರುಗಳ ಹೆಸರಿನಲ್ಲಿ ವಾಮಮಾರ್ಗದಿಂದ ಬದಲಿ ಮನೆಗಳನ್ನು ಪಡೆದಿರುವ ಆರೋಪಗಳಿವೆ.121 ಕುಟುಂಬ ಸ್ಥಳಾಂತರ: ಅಂತೆಯೇ ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಇತರೆಡೆಗಳಲ್ಲಿ

(ಮೊದಲ ಪುಟದಿಂದ) ಮನೆ ಹಾನಿಗೊಂಡ ಕುಟುಂಬಗಳ ಪೈಕಿ 121 ಮಂದಿಗೆ ಜಂಬೂರುವಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಂತೆಯೇ ಗ್ರಾಮೀಣ ಭಾಗಗಳ ಸಹಿತ ಅನೇಕರು ಜಂಬೂರು ವಿನಲ್ಲಿ, ಕೆ. ನಿಡುಗಣೆ ವ್ಯಾಪ್ತಿಯಲ್ಲಿ, ಮದೆ ಗ್ರಾ.ಪಂ.ನ ಗೋಳಿಕಟ್ಟೆಯಲ್ಲಿ ಪುನರ್ವಸತಿ ಪಡೆದಿದ್ದರೂ, ಅಪಾಯಕಾರಿ ಸ್ಥಳವನ್ನು ತೊರೆದಿಲ್ಲ.

ಹೀಗಾಗಿ ಸ್ಥಳೀಯ ಆಡಳಿತ ಗೊಂದಲದಲ್ಲಿ ಸಿಲುಕಿದ್ದು, ಪುನರ್ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ಹೊಂದಿರುವ ಕುಟುಂಬಗಳ ಕೆಲವರಷ್ಟೇ ಹೊಸ ಮನೆಗಳಲ್ಲಿ ಸೇರಿಕೊಂಡಿದ್ದಾರೆ. ಇನ್ನುಳಿದ ಒಂದಿಷ್ಟು ಮಂದಿ ಅಪೂರ್ಣ ಹಾನಿಗೀಡಾಗಿದ್ದು, ಮನೆಗಳಲ್ಲಿ ದುರಸ್ತಿ ಪಡಿಸಿಕೊಂಡು ಮತ್ತೆ ಮೊಕ್ಕಾಂ ಹೂಡಿದ್ದಾರೆ. ಸರಕಾರದಿಂದ ಈ ಹಿಂದಿನ ಮನೆ ಬಾಡಿಗೆ, ಇತರ ಸೌಲಭ್ಯ ಹೊಂದಿರುವ ಆರೋಪವೂ ಇದೆ.

ಮತ್ತೆ ನೋಟೀಸ್: ಇಂತಹ ಸ್ಥಳಗಳಿಗೆ ಜಿಲ್ಲಾಡಳಿತದಿಂದ ಅಧಿಕಾರಿಗಳ ತಂಡವೊಂದು ತೆರಳಿ, ಮುಂಗಾರುವಿನ ಅಪಾಯದಿಂದ ಪಾರಾಗಲು ಪ್ರಸ್ತುತ ವಾಸವಿರುವ ಜಾಗದಿಂದ ಸುರಕ್ಷಿತ ಕಡೆಗಳಿಗೆ ತೆರಳಬೇಕೆಂದು ಆದೇಶಿಸಿ ನೋಟೀಸ್ ಜಾರಿಗೊಳಿಸಿದೆ. ಈ ವೇಳೆ ಪುನರ್ವಸತಿ ಯೋಜನೆಯಲ್ಲಿ ಗೊಂದಲಕ್ಕೆ ಎಡೆಯಾಗಿರುವುದು ಗೋಚರಿಸಿದೆ.

ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಸಭೆ ನಡೆಸಿದ್ದು, ಗಂಭೀರ ಚರ್ಚೆ ನಡೆಸಲಾದರೂ, ಸರಕಾರದಿಂದ ಅಪಾಯಕಾರಿ ಸ್ಥಳ ಸಂಬಂಧ ಯಾವುದೇ ಮಾರ್ಗಸೂಚಿ ಬಾರದಿರುವ ಕಾರಣ, ಸದ್ಯದ ಮಟ್ಟಿಗೆ ಮೌನಕ್ಕೆ ಶರಣಾಗಿರುವ ಮಾತು ಕೇಳಿಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಒಂದಿಷ್ಟು ಭ್ರಷ್ಟರು ಅವಕಾಶವಾದಿಗಳಿಗೆ ಆಮಿಷವೊಡ್ಡುತ್ತಿದ್ದರೆ, ಇನ್ನು ಕೆಲವರು ನಿರಾಶ್ರಿತರ ಸೋಗಿನಲ್ಲಿ ದಂಧೆಯಲ್ಲಿ ತೊಡಗಿರುವ ಆರೋಪವಿದೆ. ಇಲ್ಲಿ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾಮಾಣಿಕ ಅಧಿಕಾರಿಗಳ ತಂಡ ಹೈರಾಣಾಗಿರುವ ಮಾತು ಕೇಳಿ ಬರುತ್ತಿದೆ. -ಟಿ.ಜಿ. ಸತೀಶ್