ಮಡಿಕೇರಿ, ಜೂ. 10 : ಬೆಂಗಳೂರಿನ ಆರ್ಚ್‍ಬಿಷಪ್ ಪೀಟರ್ ಮಚಾಡೊ ಹಾಗೂ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಅವರುಗಳು ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣವನ್ನು ಇದುವರೆಗೂ ಉದ್ದೇಶಕ್ಕೆ ಬಳಸದೆ ಹಣ ದುರುಪ ಯೋಗವಾಗಿರುವ ಶಂಕೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಹಾಗೂ ಮುಂಬೈ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಸಲ್ದಾನ ಆರೋಪಿಸಿದ್ದಾರೆ.2018 ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ವಿವಿಧೆಡೆ ತೀವ್ರ ಹಾನಿ ಉಂಟಾಗಿತ್ತು. ಜಿಲ್ಲೆಯ ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡವು. ಅನೇಕರು ಪ್ರಾಣ ಕಳೆದುಕೊಂಡರು. ಜಿಲ್ಲೆಯ ಹಟ್ಟಿಹೊಳೆಯಲ್ಲಿಯೂ 38 ಕುಟುಂಬಗಳ ವಸತಿಯು ಪ್ರವಾಹದ ಪರಿಣಾಮ ಹಾನಿಯಾಗಿತ್ತು. ಈ 38 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಚರ್ಚ್ ‘ಡೈಯೊಸೀಸ್’ (ಧರ್ಮಪ್ರಾಂತ್ಯ)ಕ್ಕೆ ಸೇರಿದ ಹಟ್ಟಿಹೊಳೆ ಸಮೀಪವಿರುವ ಜಾಗವನ್ನು ಗುರುತಿಸಲಾಗಿದ್ದು ,ಇಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಧರ್ಮಪ್ರಾಂತ್ಯದ ಪ್ರಮುಖರಿಂದ ನಿಶ್ಚಯಿಸಲಾಗಿತ್ತು. ಪುನರ್ವಸತಿ ಕಲ್ಪಿಸುವ ನೆಪದಲ್ಲಿ ಸುಮಾರು ರೂ.49.5 ಕೋಟಿಯಷ್ಟು ಹಣ ಸಂಗ್ರಹಾತಿಯಾಗಿದ್ದು, ಇದುವರೆಗೂ ಬಳಕೆಯಾಗಿರುವುದಿಲ್ಲ ಎಂದು ಮೈಕಲ್ ಸಲ್ದಾನ ಆರೋಪಿಸಿ ದ್ದಾರೆ. ಈ ಕುರಿತು ‘ಶಕ್ತಿ’ ಯೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ವಸತಿ ಕಲ್ಪಿಸುವುದರೊಂದಿಗೆÉ ಕುರಿ, ದನ ಸಾಕಲು ಹಾಗೂ ಇತರ ವ್ಯವಸ್ಥೆಗಳನ್ನೂ ಕಲ್ಪಿಸುವುದರೊಂದಿಗೆ ಪ್ರತಿ ಮನೆಗೆ ರೂ.18 ಲಕ್ಷದಷ್ಟು ವೆಚ್ಚವಾಗುವುದಾಗಿ ತಿಳಿಸಿ ಒಟ್ಟು 49.5 ಕೋಟಿಯಷ್ಟು ದೇಣಿಗೆ ಮೈಸೂರು ಚರ್ಚ್ ‘ಡೈಯೊಸೀಸ್’ (ಧರ್ಮಪ್ರಾಂತ್ಯ) ನಿಂದ ಸಂಗ್ರಹಾತಿ ಮಾಡಲಾಗಿದೆ. ಆದರೆ 2 ವರ್ಷಗಳು ಕಳೆದರೂ ಇನ್ನೂ ಕೂಡ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ ಎಂದಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೆ.ಆರ್.ನಗರ, ಬೆಂಗಳೂರಿನ ಚರ್ಚ್‍ಗಳಿಂದ ದೇಣಿಗೆ ಸಂಗ್ರಹಾತಿ ಮಾಡಲಾಗಿತ್ತು. ಇದರೊಂದಿಗೆ 2019 ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಕಲಾವಿದ ಸೋನು ನಿಗಮ್ ಅವರ ಕಾರ್ಯಕ್ರಮದಲ್ಲಿ ಸುಮಾರು 1ಲಕ್ಷ ದಷ್ಟು ಜನ ಸೇರಿದ್ದು, ಈ ಪೈಕಿ ಸುಮಾರು ರೂ.5 ಕೋಟಿ ಹಣ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಂಗ್ರಹಾತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನುಳಿದಂತೆ ಹಲವು ಮೂಲಗಳಿಂದ ಒಟ್ಟು ರೂ. 49.5 ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಭೂಪರಿವರ್ತನೆ ಸಮಸ್ಯೆ

ಸಂತ್ರಸ್ತರಿಗೆ ವಸತಿ ಕಲ್ಪಿಸುವ ಸ್ಥಳವು ಭೂಪರಿವರ್ತನೆ ಆಗಿರುವುದಿಲ್ಲ. ಸುಮಾರು 3 ಎಕರೆಯಷ್ಟು ಚರ್ಚ್‍ಗೆ ಸೇರಿದ ಜಾಗ ಭೂಪರಿವರ್ತನೆಯಾದ ನಂತರ ಮಾತ್ರ ವಸತಿ ನಿರ್ಮಾಣ ಕಾರ್ಯ ನಡೆಯಬೇಕು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಇನ್ನೂ ಕೂಡ ಈ ಜಾಗ ಭೂಪರಿವರ್ತನೆಗೊಂಡಿಲ್ಲ ಎಂದು ತಿಳಿದು ಬಂದಿದೆ.

ಇಂದು ಭೂ ಪರಿವರ್ತನೆ ಆಗದ ಜಾಗದಲ್ಲಿ ಶಂಕುಸ್ಥಾಪನೆ....!

ತಾ.11 ರಂದು(ಇಂದು) ಮೈಸೂರು ಧರ್ಮಪ್ರಾಂತ್ಯಕ್ಕೆ ಸೇರಿದ ಹಟ್ಟಿಹೊಳೆಯ ಚರ್ಚ್ ಜಾಗದಲ್ಲಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ.ಕೆ.ಎ. ವಿಲಿಯಂ ಅವರು ಮಧ್ಯಾಹ್ನ 3:30ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಾಗ ಭೂ ಪರಿವರ್ತನೆಗೊಳ್ಳದೆ ಶಂಕುಸ್ಥಾಪನೆ ನೆರೆವೇರಿಸುವ ಕಾರ್ಯ ಸಂಶಯಕ್ಕೆ ಎಡೆಮಾಡಿದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ

(ಮೊದಲ ಪುಟದಿಂದ) “2018 ಪ್ರಕೃತಿ ವಿಕೋಪದ ನಂತರ ಚರ್ಚ್‍ನ ಧರ್ಮಗುರು ಒಬ್ಬರು ಹಟ್ಟಿಹೊಳೆಯಲ್ಲಿ ಚರ್ಚ್‍ಗೆ ಸೇರಿದ್ದ ಜಾಗವನ್ನು ಭೂಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ, ಸರಕಾರದ ಆದೇಶದಂತೆ ಕೊಡಗಿನಲ್ಲಿ ಆಗ ಭೂ ಪರಿವರ್ತನೆಗೆ ಅವಕಾಶವಿರಲಿಲ್ಲ. ಈಗ ಸರಕಾರ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ದಾಖಲಾತಿ ಸಹಿತ ಚರ್ಚ್‍ನ ಧರ್ಮಗುರು ಭೂ ಪರಿವರ್ತನೆಗೆ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಈವರೆಗೆ ಜಿಲ್ಲಾಡಳಿತದಿಂದ ಚರ್ಚ್‍ಗೆ ಭೂ ಪರಿವರ್ತನೆಯ ಆದೇಶವನ್ನು ನೀಡಿರುವದಿಲ್ಲ,” ಎಂದು ತಿಳಿಸಿದ್ದಾರೆ.

ಭೂ ಪರಿವರ್ತನೆ ಕಾರ್ಯ ಸುಗಮವಾಗಿ ಆಗಲು ಜೂ.4 ರಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜಿಲ್ಲಾ ಪ್ರವಾಸದ ಸಂದರ್ಭ ಚರ್ಚ್ ಪ್ರಮುಖರು ಭೇಟಿ ನೀಡಿ ಮನವಿ ಮಾಡುವಂತೆ ನಿರ್ಧರಿಸಲಾಗಿತ್ತು. ಆದರೆ ಹಟ್ಟಿಹೊಳೆಯಲ್ಲಿ ವಸತಿ ಕಲ್ಪಿಸುವ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಮುಖ ಮದಲೈ ಮುತ್ತು ಅವರು ಸೇರಿದಂತೆ ಹಲವರು ಸಚಿವರನ್ನು ಭೇಟಿ ಮಾಡಲು ಹಿಂಜರಿದುದ್ದು ಸಂಶಯಾಸ್ಪದವಾಗಿದೆ ಎಂದು ಜಿಲ್ಲಾ ರೋಮನ್ ಕ್ಯಾಥೊಲಿಕ್ ಸಂಘದ ಸ್ಥಾಪಕ ಅಧ್ಯಕ್ಷ ಲಾರೆನ್ಸ್ ‘ಶಕ್ತಿ’ ಗೆ ತಿಳಿಸಿದ್ದಾರೆ. 38 ಸಂತ್ರಸ್ತ ಕುಟುಂಬದಲ್ಲಿ ಈಗಾಗಲೇ 14 ಕುಟುಂಬಗಳು ಜಂಬೂರಿನಲ್ಲಿ ಸರಕಾರ ಕಲ್ಪಿಸಿರುವ ವಸತಿ ಪಡೆದುಕೊಂಡಿರುವುದಾಗಿ ಕೂಡ ಅವರು ತಿಳಿಸಿದರು.

ಹಣ ಸಂಗ್ರಹಾತಿಯಲ್ಲಿ ಯಾವುದೇ ದುರುಪಯೋಗವಾಗಿಲ್ಲ. ಇದರ ಕುರಿತು ಸಂಪೂರ್ಣ ವಿವರ ಇಂದು ಶಂಕುಸ್ಥಾಪನೆ ಸಂದರ್ಭ ವಿವರಿಸಲಾಗುವುದು ಎಂದು ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು ‘ಶಕ್ತಿ’ ಗೆ ತಿಳಿಸಿದ್ದಾರೆ.