ಮಡಿಕೇರಿ, ಜೂ. 10: ಸರ್ಕಾರದ ಆದೇಶದಂತೆ ಕೋವಿಡ್-19 ರ ಸಂಬಂಧ ಮುಂದೂಡಲ್ಪಟ್ಟಿದ್ದ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ದ್ವಿತೀಯ ಪಿ.ಯು.ಸಿಯ ಇಂಗ್ಲೀಷ್ ವಿಷಯದ ಪರೀಕ್ಷೆಯು ರಾಜ್ಯಾದ್ಯಂತ ತಾ. 18 ರಂದು ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿ 16 ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ.
ನೆರೆ ರಾಜ್ಯದ ಜಿಲ್ಲೆಗಳಾದ ಕೇರಳದ ಕಣ್ಣೂರು ಮತ್ತು ವಯನಾಡು ಹಾಗೂ ತಮಿಳುನಾಡಿನ ನೀಲಗಿರೀಸ್ ಜಿಲ್ಲೆಗಳ ಒಟ್ಟು 5 ವಿದ್ಯಾರ್ಥಿಗಳು ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಯಾವುದೇ ತೊಂದರೆಯಾಗದಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಕಲೆಕ್ಟರ್‍ಗಳೊಂದಿಗೆ ಸಮನ್ವಯ ಸಾಧಿಸಿ ಅಂತರ ರಾಜ್ಯ ವಿದ್ಯಾರ್ಥಿಗಳಿಗೆ ಬರಲು ಪಾಸ್ ವಿತರಿಸಲಾಗಿದೆ. ಅಲ್ಲದೆ ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಕೊಡಗು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಲಿಂಗ ಶೆಟ್ಟಿÀ ಅವರನ್ನು (9448794809) ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿದೆ.
ಅದೇ ರೀತಿ ರಾಜ್ಯಾದ್ಯಂತ ತಾ. 25ರಿಂದ ಜುಲೈ 3 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅಂತರ ರಾಜ್ಯಗಳಿಂದ ಆಗಮಿಸುವ ಯಾವುದೇ ಪರೀಕ್ಷಾರ್ಥಿಗಳು ಇರುವುದಿಲ್ಲ. ಕೋವಿಡ್-19 ರ ಸಂಬಂಧ ದ್ವಿತೀಯ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಲು ಸರ್ಕಾರದ ಆದೇಶದಂತೆ ನಿಯಮಾನುಸಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.