ಮಡಿಕೇರಿ, ಜೂ. 10: ಓಡಾಟಕ್ಕೊಂದು ವಾಹನಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅಂತೆಯೇ ನೆರೆ ಜಿಲ್ಲೆ ದಕ್ಷಿಣ ಕನ್ನಡದ ಯುವಕನೋರ್ವ ಕಾರು ಖರೀದಿಸಿ ಕಾರಿನೊಂದಿಗೆ ಮನೆ ತಲಪುವ ಮುನ್ನವೇ ಕಾರು ಬೆಂಕಿಗಾಹುತಿ ಯಾದ ಬೇಸರದ ಸಂಗತಿ ನಡೆದಿದೆ.

ಸುಳ್ಯದ ಯುವಕ ಮಡಿಕೇರಿಯ ಮೆಕ್ಯಾನಿಕ್ ಓರ್ವರಿಂದ ಮಾರುತಿ ಕಾರು ಖರೀದಿಸಿದ್ದಾನೆ. ರೂ. 20 ಸಾವಿರಕ್ಕೆ ಹಳೆಯ ಕಾರನ್ನು ಖರೀದಿಸಿ ಮನೆಗೆ ತೆರಳುತ್ತಿರುವಾಗ ತಾಳತ್‍ಮನೆ ಬಳಿ ತಲಪುವಷ್ಟರಲ್ಲಿ ಕಾರಿನ ಬಾನೆಟ್‍ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಯುವಕ ಕಾರಿನಿಂದಿಳಿದಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೋರ್ವ ಯುವಕ ಸಹಾಯಕ್ಕೆ ನಿಂತಿದ್ದಾನೆ.

ಬಾನೆಟ್‍ನೊಳಗೆ ಹೊಗೆ ಬರುತ್ತಿದ್ದುದರಿಂದ ಬಾನೆಟ್ ತೆಗೆದು ನೋಡಿದಾಗ, ವಯರ್‍ಗಳು, ಪೈಪ್‍ಗಳು ಸುಟ್ಟು ಹೋಗುತ್ತಿದ್ದುದು ಕಂಡಿದೆ. ಕೂಡಲೇ ಕಾರನ್ನು ರಸ್ತೆ ಬದಿಗೆ ಸರಿಸಿ ಮಣ್ಣು, ಮರಳು ಎರಚಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಗ್ನಿಶಾಮಕ ದಳದವರಿಗೆ ಫೋನಾಯಿಸಿ ವಿಷಯ ತಿಳಿಸಿದ್ದಾರೆ. ಅವರೂ ಕೂಡ ಸ್ಥಳಕ್ಕೆ ಬಂದು ಹೆಚ್ಚಿನ ಅನಾಹುತ ಆಗುವದನ್ನು ತಪ್ಪಿಸಿದ್ದಾರೆ.

ಇತ್ತ ಕಾರು ಮಾರಾಟ ಮಾಡಿದ ಮೆಕ್ಯಾನಿಕ್‍ಗೆ ಕರೆ ಮಾಡಿ ವಿಷಯ ತಿಳಿಸಿದರೂ ಆತ ಸ್ಥಳಕ್ಕೆ ಬರುವಷ್ಟರಲ್ಲಿ ಕಾರಿನ ಇಂಜಿನ್‍ನ ಭಾಗ ಕರಕಲಾಗಿ ಹೋಗಿತ್ತು.

-ಸಂತೋಷ್