ಭದ್ರತಾ ಪಡೆಗಳಿಗೆ 5 ಉಗ್ರರು ಬಲಿ

ಶ್ರೀನಗರ, ಜೂ. 10: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಶೋಪಿಯಾನ್‍ನಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ. ಈ ಮಧ್ಯೆ, ವದಂತಿಗಳನ್ನು ತಡೆಯಲು ಈ ಪ್ರದೇಶದಲ್ಲಿ ಮೊಬೈಲ್ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಐವರು ಉಗ್ರರ ಹತ್ಯೆಯೊಂದಿಗೆ ಕಳೆದ ಎರಡು ವಾರಗಳಲ್ಲಿ ಒಟ್ಟು 27 ಉಗ್ರರನ್ನು ಭದ್ರತಾ ಪಡೆಗಳು ಕೊಂದಿವೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಬುಧವಾರ ಮುಂಜಾನೆ 1 ಗಂಟೆ 45 ನಿಮಿಷಕ್ಕೆ ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‍ಒಜಿ), 44 ರಾಷ್ಟ್ರೀಯ ರೈಫಲ್ಸ್ (ಆರ್‍ಆರ್) ಮತ್ತು ಸಿಆರ್‍ಪಿ ಎಫ್‍ನ 178 ಬೆಟಾಲಿಯನ್ ಜಂಟಿಯಾಗಿ ಶೋಪಿಯಾನ್‍ನ ಸುಗೂ ಹಂದಮಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ತಿಳಿಸಿದ್ದಾರೆ.

14 ಕಡೆ ಏಕಕಾಲಕ್ಕೆ ಎಸಿಬಿ ದಾಳಿ

ಬೆಂಗಳೂರು, ಜೂ. 10: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ರಾಜ್ಯದ ವಿವಿಧ 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್. ಸತೀಶ್‍ಕುಮಾರ್ ಸೇರಿ ರಾಜ್ಯದ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಎಲ್. ಸತೀಶ್‍ಕುಮಾರ್ ಅವರ ಮೈಸೂರು ನಗರದ ಟಿ.ಕೆ. ಲೇಔಟ್‍ನ ವಾಸದ ಮನೆ, ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಾಡಿಗೆ ಮನೆ, ಅವರು ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಗಾಂಧಿನಗರದ ವಾಣಿಜ್ಯ ತೆರಿಗೆ ಕಚೇರಿ ಮೇಲೂ ದಾಳಿ ಮಾಡಲಾಗಿದೆ. ಇನ್ನು, ಕೋಲಾರದ ಶ್ರೀನಿವಾಸಪುರ ವಲಯದ ವಲಯ ಅರಣ್ಯಾಧಿಕಾರಿ ಎನ್. ರಾಮಕೃಷ್ಣ ಅವರ ವಿಜಯ ನಗರದಲ್ಲಿನ ನಿವಾಸ, ಬೆಂಗಳೂರಿನ ವಾಸದ ಮನೆ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಪರೀಕ್ಷೆ ಸಂದರ್ಭ ಅವಘಡಗಳಿಗೆ ಅವಕಾಶವಿಲ್ಲ

ಬೆಂಗಳೂರು, ಜೂ. 10: ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಇಡೀ ಸಮಾಜ ಎದುರು ನೋಡುತ್ತಿದ್ದು, ಯಾವುದೇ ಅವಘಡಗಳಿಗೆ ಅವಕಾಶ ನೀಡದೆ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವ ಸಿದ್ಧತೆ ಕುರಿತಂತೆ ರಾಜ್ಯಾದ್ಯಂತ 31 ಜಿಲ್ಲಾ ಕೇಂದ್ರಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್‍ಗಳಷ್ಟು ಸಂಚಾರ ಕೈಗೊಂಡು, ಸಭೆ ನಡೆಸಿ ನಿರ್ದೇಶನ ನೀಡಿರುವ ಸಚಿವ ಸುರೇಶ್ ಕುಮಾರ್, ಇಂದು ತಮ್ಮ ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದರು. ರಾಜ್ಯ ಹೈಕೋರ್ಟ್ ನಿರ್ದೇಶನದ ಅನುಸಾರ ನಡೆಯುತ್ತಿರುವ ಪರೀಕ್ಷೆಗಳು ಸಮಾಜಕ್ಕೆ ಭರವಸೆ ಮೂಡಿಸುವ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆಯಾಗಬೇಕು, ಪರೀಕ್ಷೆಗಳು ನಡೆಯುತ್ತಿರುವ ಈ ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ಪ್ರತಿಷ್ಠೆಯಾಗಿ ಪರಿಗಣಿಸದೇ ನಮ್ಮ ಸಾಮಾಜಿಕ ಬದ್ಧತೆಗೆ ಸವಾಲಾಗಿ ಪರಿಗಣಿಸಿ ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.

5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣ ರದ್ದು

ಬೆಂಗಳೂರು, ಜೂ. 10: ರಾಜ್ಯದಲ್ಲಿ ಪುಟ್ಟ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ಎಲ್‍ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ರದ್ದುಗೊಳಿಸಿದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ನಂತರ ಆನ್‍ಲೈನ್ ಶಿಕ್ಷಣ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಎಲ್ಲಾ ಶಾಲೆಗಳು ಎಲ್‍ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ನಿಲ್ಲಿಸಬೇಕು. ಆನ್‍ಲೈನ್ ತರಗತಿ ಹೆಸರಿನಲ್ಲಿ ತೆಗೆದುಕೊಳ್ಳುತ್ತಿರುವ ಶುಲ್ಕವನ್ನು ಕೂಡ ಕೂಡಲೇ ನಿಲ್ಲಿಸಬೇಕು. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಈ ವರ್ಷ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಆದರೆ, ಶುಲ್ಕವನ್ನು ಕಡಿತಗೊಳಿಸಲು ಅವಕಾಶವಿದೆ ಎಂದು ಹೇಳಿದರು.

ಖರ್ಗೆ ಕುಂಟುಂಬಕ್ಕೆ ಜೀವ ಬೆದರಿಕೆ

ಬೆಂಗಳೂರು, ಜೂ. 10: ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಜೀವ ಬೆದರಿಕೆ ಕರೆ ಬಗ್ಗೆ ಚರ್ಚಿಸಿದ ರಾಜ್ಯ ಕಾಂಗ್ರೆಸ್ ನಾಯಕರು, ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಎರಡು ವರ್ಷಗಳ ಹಿಂದೆ ದೆಹಲಿಯಲಿದ್ದ ತಮಗೆ ಬೆದರಿಕೆ ಕರೆ ಬಂದಿತ್ತು. ಆಗ ಲೋಕಸಭೆ ಸ್ಪೀಕರ್ ಹಾಗೂ ಪ್ರಧಾನಿಯವರ ಗಮನಕ್ಕೆ ತಂದು ದೆಹಲಿಯ ತುಘಲಕ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಈ ಬಗ್ಗೆ ಇನ್ನೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಈಗ ಮತ್ತೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಪುತ್ರ ಪ್ರಿಯಾಂಕ್ ಖರ್ಗೆಗೂ ಕರೆ ಮಾಡಿ ಬೆದರಿಕೆ ಹಾಕಿದ್ದು, ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಪೊಲೀಸರು ಏನು ಮಾಡುತ್ತಾರೆಯೋ ನೋಡೋಣ ಎಂದರು. ಯಾರು ಕರೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ಪತ್ತೆ ಹೆಚ್ಚಬೇಕು. ಸರ್ಕಾರದ ಬಳಿ ಎಲ್ಲಾ ಮಾಹಿತಿ ಸಿಗಲಿದೆ. ಸರ್ಕಾರ ತನಿಖೆ ನಡೆಸಿ ಕರೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಿಒಡಿ ತನಿಖೆಗೆ ಇದನ್ನ ವಹಿಸಬೇಕು ಒಂದು ಒತ್ತಾಯಿಸಿದರು.

ರಾಜಸ್ಥಾನ ರಾಜ್ಯದ ಗಡಿಗಳು ಬಂದ್

ಜೈಪುರ, ಜೂ. 10: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದು ವಾರದ ಮಟ್ಟಿಗೆ ರಾಜಸ್ಥಾನ ಸರ್ಕಾರ ರಾಜ್ಯ ಎಲ್ಲಾ ಗಡಿಗಳನ್ನು ಬಂದ್ ಮಾಡಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜಸ್ಥಾನ ಸರ್ಕಾರ, ಎನ್‍ಒಸಿ ಪ್ರಮಾಣಪತ್ರವಿಲ್ಲದೆಯೇ ಯಾರೊಬ್ಬರೂ ರಾಜ್ಯ ಪ್ರವೇಶಿಸುವಂತಿಲ್ಲ. ಅಲ್ಲದೆ, ಪಾಸ್‍ಗಳಿಲ್ಲದೆ, ರಾಜ್ಯದಿಂದ ಯಾರೊಬ್ಬರೂ ಕೂಡ ಹೊರ ಹೋಗುವಂತಿಲ್ಲ ಎಂದು ತಿಳಿಸಿದೆ. ಆದೇಶ ಕುರಿತು ಈಗಾಗಲೇ ಐಜಿ, ಎಸ್‍ಪಿ, ಪೊಲೀಸ್ ಆಯುಕ್ತರು, ಉಪ ಆಯುಕ್ತರಿಗೆ ಸೂಚನೆ ನೀಡಿರುವ ಸರ್ಕಾರ ಗಡಿಯಲ್ಲಿ ಎಲ್ಲಾ ರೀತಿಯ ಭದ್ರತೆ ಹಾಗೂ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಂದಿನ 7 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.