ಮಡಿಕೇರಿ, ಜೂ. 10: ಮಡಿಕೇರಿ ನಗರಸಭೆಯ ಆಸ್ತಿ ತೆರಿಗೆ ಕುರಿತಾದ ಗೊಂದಲಕ್ಕೆ ಸಂಬಂಧಿಸಿದಂತೆ ರಾಜ್ಯದ ಪೌರಾಡಳಿತ ಇಲಾಖೆಯ ನಿರ್ದೇಶಕರಾಗಿರುವ ಕೊಡಗು ಮೂಲದವರಾದ ಬಿ.ಬಿ. ಕಾವೇರಿ ಅವರೊಂದಿಗೆ ಚರ್ಚಿಸಲಿರುವದಾಗಿ ವಿಧಾನ ಪರಿಷತ್ ಸದಸ್ಯ ಎಂ.ಸಿ. ಸುನಿಲ್ ಸುಬ್ರಮಣಿ ಅವರು ತಿಳಿಸಿದ್ದಾರೆ.‘ಶಕ್ತಿ’ಯಲ್ಲಿ ತಾ. 10 ರಂದು ಪ್ರಕಟವಾದ ‘ ಈ ಅವಾಂತರಗಳನ್ನು ಸರಿಪಡಿಸುವದು ಯಾರು?’ ವರದಿ ಕುರಿತಾಗಿ ನಗರಸಭೆಯ ಪ್ರಭಾರ ಆಯುಕ್ತ ಶ್ರೀನಿವಾಸ್ ಅವರೊಂದಿಗೆ ಇಂದು ಚರ್ಚಿಸಿದ್ದು, ಈ ಕುರಿತಾಗಿ ಪೂರ್ಣ ವಿವರಗಳನ್ನು ಒದಗಿಸುವಂತೆ ಸುನಿಲ್ ಅವರು ಇಂದು ಸೂಚಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರೊಂದಿಗೆ ತಾವು ಚರ್ಚಿಸಲಿದ್ದು, ಪ್ರಸ್ತುತ ಕಂಡು ಬಂದಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವದಾಗಿ ಸುನಿಲ್ ‘ಶಕ್ತಿ’ಗೆ ತಿಳಿಸಿದ್ದಾರೆ. ಆಸ್ತಿ ತೆರಿಗೆ ಗೊಂದಲ ಕುರಿತಾಗಿ ಅವರಿಗೆ ವಿವರಿಸಲಿದ್ದು, ಇಲಾಖೆಯ ಮೂಲಕ ಈ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸುವದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.