ಗೋಣಿಕೊಪ್ಪಲು, ಜೂ. 9: ಸರಕಾರದಿಂದ ಸಿಗುವ ವಿವಿಧ ಪರಿಹಾರಗಳಿಂದ ರೈತರು ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿ.ಬಾಡಗ ಗ್ರಾಮದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು ರೈತ ಸಂಘದ ನಿರಂತರ ಚಳುವಳಿಯಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿದ್ದು, ಮುಂದೆಯೂ ಹೋರಾಟ ನಡೆಸಲಾಗುವುದು ಎಂದರು. ಗ್ರಾಮದ ರೈತರಾದ ಚೇಮಿರಾ ಅರ್ಜುನ, ಮಚ್ಚರಂಡ ಪ್ರವೀಣ್, ಕರ್ತಮಾಡ ಕಾವೇರಪ್ಪ, ಕೊಕ್ಕೆರ ಮುತ್ತಣ್ಣ, ಚೇಮಿರ ಪ್ರಕಾಶ್, ಮುಂತಾದವರು ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. 15 ದಿನಗಳ ನಂತರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಆಯೋಜಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಗಾಡಂಗಡ ಉತ್ತಯ್ಯ, ಪೆಮ್ಮಂಡ ಉಮೇಶ್, ಚೆಪ್ಪುಡೀರ ರೋಷನ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ವಿ. ಬಾಡಗ ಹಾಗೂ ರುದ್ರಗುಪ್ಪೆ ಗ್ರಾಮದ ನೂರಾರು ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ಹಸಿರು ಶಾಲು ಧರಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯದರ್ಶಿ ಸುಜಯ್ ಬೋಪಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಚೇಮಿರ ಅರ್ಜುನ್ ಸ್ವಾಗತಿಸಿ, ವಂದಿಸಿದರು.