ಕುಶಾಲನಗರ, ಜೂ. 9: ಕಾವೇರಿ ನದಿ ನಿರ್ವಹಣೆ ಕಾಮಗಾರಿ ಬೆನ್ನಲ್ಲೇ ಜಲಾನಯನ ಪ್ರದೇಶಗಳಲ್ಲಿ ಮಳೆಯಾದ ಹಿನ್ನೆಲೆ ಕುಶಾಲನಗರ ವ್ಯಾಪ್ತಿಯಲ್ಲಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುವು ದರೊಂದಿಗೆ ವಿಶಾಲ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.

ಕಳೆದ 20 ದಿನಗಳಿಂದ ಕುಶಾಲನಗರ ಪಟ್ಟಣ ವ್ಯಾಪ್ತಿಯ ಆಯ್ದ ನದಿ ಪ್ರದೇಶಗಳಲ್ಲಿ ಸರಕಾರದ ಸೂಚನೆಯಂತೆ ನದಿ ನಿರ್ವಹಣೆ ಕಾಮಗಾರಿ ನಡೆದು ಬಹುತೇಕ ಪೂರ್ಣಗೊಳ್ಳುವ ಮೊದಲೇ ಮಳೆ ನೀರು ಹರಿದ ಕಾರಣ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕುಶಾಲ ನಗರದ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಮನವಿ ಮೇರೆಗೆ ಕೊಡಗು ಜಿಲ್ಲಾಡಳಿತ ಜಿಲ್ಲಾಧಿಕಾರಿ ಗಳ ಆಡಳಿತಾತ್ಮಕ ಅನುಮೋದನೆ ದೊರೆತು ಈ ಬಾರಿ ನದಿ ತಟದ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡಿದ್ದರು.

ಕಾವೇರಿ ನೀರಾವರಿ ನಿಗಮ ಮೂಲಕ ನಡೆಯುತ್ತಿರುವ ಈ ಕಾಮಗಾರಿ ಕುಶಾಲನಗರ ಕೊಪ್ಪ ಕಾವೇರಿ ಸೇತುವೆ ಕೆಳಭಾಗದಲ್ಲಿ ಕಳೆದ ದಶಕಗಳಿಂದ ಸಂಗ್ರಹಗೊಂಡಿದ್ದ ಸಾವಿರಾರು ಲೋಡ್‍ಗಳಷ್ಟು ಮಣ್ಣನ್ನು ಮತ್ತು ನದಿಯಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ, ಜೆಂಡುಗಳನ್ನು ತೆರವುಗೊಳಿಸಲಾಗಿದೆ. ಇದೀಗ ಸೇತುವೆ ಕೆಳಭಾಗದಲ್ಲಿ ಸುಮಾರು 120 ಮೀ ಗಿಂತಲೂ ಅಧಿಕ ಅಗಲದಲ್ಲಿ ನದಿ ನೀರು ಹರಿಯುತ್ತಿರುವ ದೃಶ್ಯ ನೋಡಲು ಮನಮೋಹಕವಾಗಿ ಕಂಡುಬರುತ್ತಿದೆ.

ಅಂದಾಜು 60 ಮೀಟರ್ ಗಿಂತಲೂ ಅಗಲದಲ್ಲಿ ಮಣ್ಣುರಾಶಿ ಸುಮಾರು 10 ಅಡಿ ಎತ್ತರಕ್ಕೆ ಸಂಗ್ರಹಗೊಂಡು ನೀರಿನ ಹರಿವಿಗೆ ಅಡ್ಡಿಯುಂಟಾಗಿತ್ತು. ಈ ಬಾರಿ ಪ್ರವಾಹ ಮಟ್ಟ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀರಿನ ಸರಾಗ ಹರಿವಿಗೆ ಅಡ್ಡಿಯಿದ್ದದ್ದರಿಂದ ಕುಶಾಲನಗರದ ತಾವರೆಕೆರೆಯಿಂದ ಸೇತುವೆ ತನಕ 5 ಕ್ಕೂ ಅಧಿಕ ಬಡಾವಣೆಗಳು ಜಲಾವೃತಗೊಳ್ಳುತ್ತಿತ್ತು. ನೆರೆಯ ಕೊಪ್ಪ ಗ್ರಾಮದ ನೂರಾರು ಮನೆಗಳು ಮತ್ತು ಹೆದ್ದಾರಿ ಮೇಲೆ ನೀರು ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತಿತ್ತು.

ಬೈಚನಹಳ್ಳಿ ಭಾಗದ ಯೋಗಾನಂದ ಬಡಾವಣೆ ಬಳಿ ನದಿಯಲ್ಲಿ ಸುಮಾರು 500 ಮೀ ಉದ್ದಕ್ಕೆ ಮತ್ತು ಅಗಲವಾಗಿ ಭಾರೀ ಪ್ರಮಾಣದ ಮಣ್ಣು ಗಿಡಗಂಟಿಗಳನ್ನು ಕೂಡ ತೆರವುಗೊಳಿಸಲಾಗಿದೆ. ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಸೇರಿದಂತೆ ಕುವೆಂಪು ಬಡಾವಣೆ ಕೆಳಭಾಗ, ತಪೋವನ ಎದುರುಗಡೆ ನದಿಯಲ್ಲಿ ಗಿಡಗಂಟಿಗಳನ್ನು ಮತ್ತು ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಆದರೆ ಗುಮ್ಮನಕೊಲ್ಲಿ ಗ್ರಾಮದ ಎದುರು ಭಾಗದಲ್ಲಿ ಪಿರಿಯಾ ಪಟ್ಟಣದ ಕೆರೆ ತುಂಬುವ ಯೋಜನೆ ಕಾಮಗಾರಿ ನಡೆಯುತ್ತಿದ್ದು ಭಾರೀ ಪ್ರಮಾಣದ ಮಣ್ಣನ್ನು ನದಿಗೆ ತುಂಬಿಸಿರುವ ಕಾರಣ ನದಿಯ ಅಗಲ ಬಹುತೇಕ ಕಿರಿದಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಇದರಿಂದ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಸೇರಿದಂತೆ ಆವರ್ತಿ ಗ್ರಾಮದ ಬಹುತೇಕ ಕೃಷಿ ಜಮೀನುಗಳು ಜಲಾವೃತಗೊಳ್ಳುತ್ತಿವೆ ಎಂದು ತಮ್ಮ ಸಮಸ್ಯೆಯನ್ನು ತೋಡಿ ಕೊಂಡಿದ್ದಾರೆ. ಇದರಿಂದ ಕಳೆದ ಎರಡು ವರ್ಷಗಳ ಕಾಲ ನದಿಯಲ್ಲಿ ನೀರಿನ ಹರಿವಿಗೆ ಅಡ್ಡಿಯುಂಟಾ ಗಿದ್ದು ಕುಶಾಲನಗರ ಪಟ್ಟಣಕ್ಕೂ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಆ ಭಾಗದ ರೈತರು ಶಕ್ತಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನದಿಗೆ ಸುರಿದಿರುವ ಮಣ್ಣನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಮತ್ತೆ ಪ್ರವಾಹ ಎದುರಾಗುವ ಭೀತಿ ಯಿದೆ ಎಂದು ಅಲ್ಲಿನ ರೈತರಾದ ಮಹದೇವಪ್ಪ ಎಂಬವರು ತಿಳಿಸಿದ್ದಾರೆ. ಕಾವೇರಿ ನದಿ ನಿರ್ವಹಣೆ ಕಾಮಗಾರಿ ಮೂಲಕ ಪ್ರವಾಹದ ಮಟ್ಟ ಕನಿಷ್ಟ ಪ್ರಮಾಣದಲ್ಲಾದರೂ ಇಳಿಕೆಯಾಗುವ ಸಾಧ್ಯತೆ ಬಗ್ಗೆ ನದಿ ತಟದ ಜನತೆಯಲ್ಲಿ ಪ್ರತಿಕ್ರಿಯೆ ಕಂಡುಬರುತ್ತಿದ್ದು ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಗೊಂಡಿದೆ.

- ಚಂದ್ರಮೋಹನ್.