ಮಡಿಕೇರಿ, ಜೂ. 9: ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಮೂಲಕ ಸಣ್ಣ ರೈತರಿಂದ ಬೆಂಬಲ ಬೆಲೆಯಡಿ ಭತ್ತ ಖರೀದಿ ಯೋಜನೆಯಂತೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 599 ರೈತರಿಂದ 16,143 ಕ್ವಿಂಟಾಲ್‍ನಷ್ಟು ಭತ್ತ ಖರೀದಿಸಲಾಗಿದೆ.ಇದಕ್ಕಾಗಿ ಕೇಂದ್ರ ಸರಕಾರದಿಂದ ಪ್ರತಿ ಕ್ವಿಂಟಾಲ್‍ಗೆ ರೂ. 1,815 ದರ ನಿಗದಿಪಡಿಸಲಾಗಿದ್ದು, ರಾಜ್ಯ ಸರಕಾರ ಇದರ ಮೇಲೆ ರೂ. 200 ಇನ್‍ಸೆಂಟಿವ್ ಪ್ರಕಟಿಸಿತ್ತು. ಇದರಂತೆ 599 ರೈತರಿಗೆ ಕೇಂದ್ರದ ಅನುದಾನದಂತೆ ರೂ. 2.93 ಕೋಟಿಯಷ್ಟು ಹಣ ದೊರೆಯಬೇಕಿದ್ದು, ರಾಜ್ಯ ಸರಕಾರದಿಂದ ಕ್ವಿಂಟಾಲ್‍ಗೆ ರೂ. 200 ರಂತೆ ಹಣ ರೈತರಿಗೆ ಸೇರಬೇಕಿತ್ತು. ಇದರಲ್ಲಿ ಕೇಂದ್ರದ ಅನುದಾನ ಲಭ್ಯವಾಗಿದ್ದರೆ ರಾಜ್ಯ ಸರಕಾರದ ಘೋಷಿತ ಹಣ ಇನ್ನಷ್ಟೆ ಸಿಗಬೇಕಿದೆ.ಒಟ್ಟು 599 ರೈತರ ಈ ಯೋಜನೆಯಲ್ಲಿ ಪ್ರಸಕ್ತ ವರ್ಷ ನೋಂದಾಯಿತರಾಗಿದ್ದು, ಇದೀಗ 591 ರೈತರಿಗೆ ಬೆಂಬಲ ಬೆಲೆಯ ಹಣ ಕೈ ಸೇರಿದೆ. ಉಳಿಕೆ 8 ಮಂದಿಗೆ ತಾಂತ್ರಿಕ ಕಾರಣದ ಸಮಸ್ಯೆಯಿಂದಾಗಿ ಹಣ ಪಾವತಿ ವಿಳಂಬವಾಗಿದೆ. ಸುಮಾರು 50 ರೈತರಿಗೆ ತಾಂತ್ರಿಕ ಕಾರಣಗಳಿಂದಾಗಿ ಹಣ ಪಾವತಿಗೆ ಸಮಸ್ಯೆಯಾಗಿತ್ತು. ಇದೀಗ ಬಹುತೇಕ ಮಂದಿಯ ದಾಖಲೆ ಸರಿಯಾಗಿದ್ದು, 8 ಮಂದಿಗೆ ಮಾತ್ರ ಬಾಕಿ ಇದೆ. ಸಂಬಂಧಿಸಿದ ನೋಡಲ್ ಏಜೆನ್ಸಿ ಮೂಲಕ ಇದನ್ನು ಸರಿಪಡಿಸಲಾಗುತ್ತಿದ್ದು, ಸದ್ಯದಲ್ಲಿ ಹಣ ಇವರಿಗೂ ಸಿಗಬಹುದಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಅವರು ‘ಶಕ್ತಿ’ಗೆ ತಿಳಿಸಿದರು.

ಈ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಗೆ ಕರ್ನಾಟಕ ಆಹಾರ ಸರಬರಾಜು ಮತ್ತು ನಾಗರಿಕ ಪೂರೈಕೆ ನಿಗಮ ನೋಡಲ್ ಏಜೆನ್ಸಿಯಾಗಿದೆ. ಇದಕ್ಕೆ ಒಬ್ಬರು ಜಿಲ್ಲಾ ವ್ಯವಸ್ಥಾಪಕರು ಇದ್ದು, ಶಿವಮಾದು ಎಂಬವರು ಮೈಸೂರು ಹಾಗೂ ಕೊಡಗಿನ ಜವಾಬ್ದಾರಿ ಹೊಂದಿದ್ದರು. ಈ ಏಜೆನ್ಸಿ ಮೂಲಕ ಭತ್ತ ಖರೀದಿಗೆ ಜಿಲ್ಲೆಯ ಆರು ಅಕ್ಕಿ ಗಿರಣಿಗಳು ನಿಯಮಾನುಸಾರವಾಗಿ ತಮ್ಮ ದಾಖಲಾತಿ ನೀಡಿ ನೋಂದಾಯಿತವಾಗಿದ್ದವು. ಗುಡ್ಡೆಹೊಸೂರಿನ ಮಂಜುನಾಥೇಶ್ವರ ರೈಸ್ ಮಿಲ್, ಗೋಣಿಮರೂರುವಿನ ತೇಜಸ್ವಿನಿ ರೈಸ್ ಮಿಲ್, ಹೆಬ್ಬಾಲೆಯ ಎ.ಆರ್. ಇಂಡಸ್ಟ್ರೀಸ್, ಕೊಡ್ಲಿಪೇಟೆಯ ಅನ್ನಪೂರ್ಣ ರೈಸ್ ಮಿಲ್, ವೀರಾಜಪೇಟೆಯ ವೆಂಕಟೇಶ್ವರ ಹಾಗೂ ಪೊನ್ನಂಪೇಟೆಯ ರಾಮಕೃಷ್ಣ ರೈಸ್ ಮಿಲ್ ಈ ಬಾರಿ ನೋಂದಣಿಗೊಂಡು

(ಮೊದಲ ಪುಟದಿಂದ) ಭತ್ತ ಖರೀದಿಯ ಅವಕಾಶ ಪಡೆದಿತ್ತು. ಇದರೊಂದಿಗೆ ನೋಂದಾಯಿಸಿಕೊಂಡ ರೈತರಿಗೆ ಅವರ ಸನಿಹದ ವ್ಯಾಪ್ತಿಯ ಮಿಲ್‍ಗಳಿಗೆ ಭತ್ತ ನೀಡಲು ಅವಕಾಶ ಕಲ್ಪಿಸಲಾಗಿತ್ತು.

ಯೋಜನೆಯಂತೆ ಭತ್ತ ನೀಡಿದ ಬಳಿಕ ತಿಂಗಳ ಅವಧಿಯೊಳಗೆ ಹಣ ನೀಡಬೇಕಿತ್ತಾದರೂ ಕೆಲವೆಡೆ ವಿಳಂಬವಾಗಿತ್ತು. ಆದರೂ ಇದೀಗ 591 ಮಂದಿಗೆ ಕೇಂದ್ರದ ಅನುದಾನ ದೊರೆತಿದೆ. 8 ಮಂದಿಗೆ ಬಾಕಿ ಇದೆ. ಆದರೆ ರಾಜ್ಯದ ಹಣ ಕೋವಿಡ್ ಕಾರಣದಿಂದ ವಿಳಂಬವಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ಮಾಹಿತಿಯಿತ್ತರು. ಎರಡು ಹೆಕ್ಟೇರ್‍ಗಿಂತ ಕಡಿಮೆ ಜಮೀನು ಇರುವ ರೈತರು ಈ ಬೆಂಬಲ ಬೆಲೆ ಯೋಜನೆಗೆ ಅರ್ಹತೆ ಹೊಂದಿದ್ದರು.

ತ್ವರಿತ ಸಹಕಾರಕ್ಕೆ ಆಗ್ರಹ

ಪ್ರಸ್ತುತ ಮತ್ತೊಮ್ಮೆ ಕೃಷಿ ಚಟುವಟಿಕೆ ಆರಂಭದ ಸಮಯ ಎದುರಾಗಿದೆ. ಆದರೆ ಭತ್ತ ನೀಡಿ ಹಲವು ತಿಂಗಳು ಕಳೆದಿದ್ದರೂ ಇನ್ನೂ ಹಣ ಕೈ ಸೇರಿಲ್ಲ. ಇದೀಗ ರೈತರಿಗೆ ಖರ್ಚಿನ ಸಮಯವಾಗಿದ್ದು, ತ್ವರಿತವಾಗಿ ಹಣ ಪಾವತಿಸುವಂತಾಗಬೇಕು. ಜತೆಗೆ ರಾಜ್ಯ ಸರಕಾರದಿಂದ ಬರಬೇಕಾದ ಸಹಕಾರವೂ ತ್ವರಿತವಾಗಿ ಸಿಗಬೇಕು ಎಂದು ನಾಂಗಾಲದ ರೈತ ಬೊಪ್ಪಂಡ ರವಿ ಅವರು ಆಗ್ರಹಿಸಿದ್ದಾರೆ.