ಗೋಣಿಕೊಪ್ಪಲು, ಜೂ. 9 : ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಯ ಮುಂದಿನ 20 ತಿಂಗಳ ಕೊನೆಯ ಅವಧಿಗೆ ಅಧ್ಯಕ್ಷರಾಗಿ ಹುದಿಕೇರಿ ಕ್ಷೇತ್ರದ ಅಜ್ಜಿಕುಟ್ಟೀರ ಎಂ.ಮುತ್ತಪ್ಪ ಪ್ರವೀಣ್ ಹಾಗೂ ಟಿ.ಶೆಟ್ಟಿಗೇರಿ ಕ್ಷೇತ್ರದ ಬೊಳ್ಳಜಿರ ಸುಶೀಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಚುನಾವಣಾಧಿ ಕಾರಿಯಾಗಿ ವೀರಾಜಪೇಟೆ ತಹಶೀಲ್ದಾರ್ ಕೆ.ಎಂ.ನಂದೀಶ್, ಸಹಾಯಕರಾಗಿ ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಕಾರ್ಯನಿರ್ವಹಿಸಿದ್ದರು.11 ಗಂಟೆಯವರೆಗೆ ಸದಸ್ಯರ ಹಾಜರಾತಿ ಪರಿಶೀಲನೆ ಸಂದರ್ಭ ಎಲ್ಲ 14 ಸದಸ್ಯರೂ ಹಾಜರಾಗಿದ್ದರು. ಬಿಜೆಪಿ ಹೈಕಮಾಂಡ್ ಮೊದಲೇ ಮುಂದಿನ 20 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡಿಕೊಂಡಿದ್ದ ಹಿನ್ನೆಲೆ ನಿಗದಿತ 11.30 ಗಂಟೆಗೂ ಮುನ್ನ ಅಜ್ಜಿಕುಟ್ಟೀರ ಎಂ.ಮುತ್ತಪ್ಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಹಾಗೂ ಬೊಳ್ಳಜಿರ ಸುಶೀಲ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಪರಿಶೀಲನೆ, ವಾಪಾಸಾತಿ ಪ್ರಕ್ರಿಯೆ ಮುಗಿದ ನಂತರ ಅಗತ್ಯವಿದ್ದಲ್ಲಿ ಚುನಾವಣೆ ನಡೆಸುವ ಅವಕಾಶವಿದ್ದು, ಯಾವದೇ ಪ್ರತಿ ಸ್ಪರ್ಧಿಗಳಿಲ್ಲದ ಹಿನ್ನೆಲೆ ಎ.ಎಂ.ಮುತ್ತಪ್ಪ ಹಾಗೂ ಸುಶೀಲ ಅವರನ್ನು ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯಾಗಿರುವದಾಗಿ ಘೋಷಣೆ ಮಾಡಿದರು.

ಅಧಿಕಾರ ವಿಕೇಂದ್ರಿಕರಣದ ಅನ್ವಯ ಪಕ್ಷನಿಷ್ಠೆ ತೋರಿದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೊದಲ 20 ತಿಂಗಳ ಅವಧಿಗೆ ಮಾಚಿಮಂಡ ಸುವಿನ್ ಗಣಪತಿ

(ಮೊದಲ ಪುಟದಿಂದ) ಅಧ್ಯಕ್ಷರಾಗಿ ಹಾಗೂ ಕಳ್ಳೇಂಗಡ ಬಾಲಕೃಷ್ಣ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದ್ವಿತೀಯ 20 ತಿಂಗಳ ಅಧ್ಯಕ್ಷ ಅವಧಿಯನ್ನು ಆದೇಂಗಡ ವಿನು ಚಂಗಪ್ಪ ಹಾಗೂ ಮಾಚಂಗಡ ಸುಜು ಪೂಣಚ್ಚ ಅವರುಗಳು ತಲಾ 10 ತಿಂಗಳಿನಂತೆ ಹಂಚಿಕೊಂಡಿದ್ದು, ಈ ಹಂತದಲ್ಲಿ ಉಪಾಧ್ಯಕ್ಷರಾಗಿ ಹಾಗೂ 1 ತಿಂಗಳು ಪ್ರಭಾರ ಅಧ್ಯಕ್ಷರಾಗಿ ಚಿಯಕ್‍ಪೂವಂಡ ಸುಬ್ರಮಣಿ 20 ತಿಂಗಳು ಪೂರೈಸಿದ್ದರು. ಇದೀಗ ಕಡೆಯ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಅಜ್ಜಿಕುಟ್ಟೀರ ಎಂ.ಮುತ್ತಪ್ಪ ಪ್ರವೀಣ್ ಮತ್ತು ಉಪಾಧ್ಯಕ್ಷರಾಗಿ ಬೊಳ್ಳಜಿರ ಸುಶೀಲ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ತಹಶೀಲ್ದಾರ್ ನಂದೀಶ್ ಅವರು ಅವಿರೋಧ ಆಯ್ಕೆ ಬಗ್ಗೆ ಅಧಿಕಾರ ಪತ್ರವನ್ನು ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಹಸ್ತಾಂತರಿಸಿದರು.

ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾಕುಶಾಲಪ್ಪ, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್, ವರ್ತಕರ ಕ್ಷೇತ್ರದ ಜಿ.ಎಸ್. ಕಿಲನ್ ಗಣಪತಿ, ಮಾಜಿ ಎಪಿಎಂಸಿ ಅಧ್ಯಕ್ಷ ಸುವಿನ್‍ಗಣಪತಿ, ಮೂಕೋಂಡ ಶಶಿ ಸುಬ್ರಮಣಿ, ಆದೇಂಗಡ ವಿನು ಚಂಗಪ್ಪ, ಮಾಚಂಗಡ ಸುಜಾ ಪೂಣಚ್ಚ, ನಾಮ ನಿರ್ದೇಶಿತ ಸದಸ್ಯರು, ಪಕ್ಷದ ಪ್ರಮುಖರು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಪಕ್ಷದ ಹಿತೈಷಿಗಳು ಹೂ ಗುಚ್ಛ ನೀಡಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶುಭಕೋರಿದರು.

ಈ ಹಿಂದೆ ಕೈಗೊಳ್ಳಲಾಗಿರುವ ಗ್ರಾಮೀಣ ಸಂತೆ, ಕೃಷಿ ಕಣ, ಗೋದಾಮು, ಇತ್ಯಾದಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವದು. ಪಾರದರ್ಶಕವಾಗಿ ರೈತರ ಅಭ್ಯುದಯಕ್ಕಾಗಿ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಎಪಿಎಂಸಿ ಕಾಯ್ದೆ ಜಾರಿಗೆ ತಮ್ಮ ಸಹಮತವಿದೆ. ಇದರ ಸಾಧಕ ಬಾಧಕ ಅವಲೋಕಿಸಿ, ಮುಂದೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲಾಗುವದು ಎಂದು ನೂತನ ಅಧ್ಯಕ್ಷ ಎ.ಎಂ.ಮುತ್ತಪ್ಪ ಮತ್ತು ಬೊಳ್ಳಜಿರ ಸುಶೀಲ ಅಭಿಪ್ರಾಯಪಟ್ಟರು.

ಎ.ಪಿ.ಎಂ.ಸಿ.ಸದಸ್ಯರಾದ ಅರಮೇರಿಯ ಕೆ.ಯು.ಭೀಮಣಿ, ಚೆಂಬೆಬೆಳ್ಳೂರುವಿನ ಜೆ.ಕೆ.ಅಯ್ಯಪ್ಪ, ಪಾಲಿಬೆಟ್ಟ ಕ್ಷೇತ್ರದ ಹೆಚ್.ಎನ್. ಮೋಹನ್‍ರಾಜು, ನಾಮನಿರ್ದೇಶಿತ ಸದಸ್ಯರಾದ ಕಟ್ಟೇರ ಈಶ್ವರ ತಿಮ್ಮಯ್ಯ, ಕುಂಬೆಯಂಡ ಗಣೇಶ್ ಹಾಗೂ ತೀತಿರ ಊರ್ಮಿಳಾ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ ಉಪಸ್ಥಿತರಿದ್ದರು.

ಗೋಣಿಕೊಪ್ಪಲು ಎಪಿಎಂಸಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಎಲ್ಲ 12 ಕ್ಷೇತ್ರಗಳನ್ನೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿ.ಶೇಟ್ಟಿಗೇರಿ ಕ್ಷೇತ್ರದ ನಾಮೇರ ಧರಣಿ ನಿಧನರಾದ ಹಿನ್ನೆಲೆ ಸದಸ್ಯಬಲ 11ಕ್ಕೆ ಕುಸಿದಿದ್ದು, ಇದೀಗ ನೂತನ ನಾಮನಿರ್ದೇಶನ ಸದಸ್ಯರಾಗಿ ಬಿಜೆಪಿಯ ಕಟ್ಟೇರ ಕೆ.ತಿಮ್ಮಯ್ಯ, ಕುಂಬೆಯಂಡ ಭೀಮಯ್ಯ ಗಣೇಶ್ ಹಾಗೂ ಟಿ.ಎಸ್. ಊರ್ಮಿಳಾ ಆಯ್ಕೆಯಾಗುವ ಮೂಲಕ ಎಪಿಎಂಸಿ ಒಟ್ಟು 14 ಸದಸ್ಯಬಲ ಹೊಂದಿದೆ. -ಎನ್.ಎನ್. ದಿನೇಶ್