ಪರೀಕ್ಷೆ ವಿರುದ್ಧ ಸುಪ್ರೀಂಗೆ ಅರ್ಜಿ

ಬೆಂಗಳೂರು, ಜೂ. 9: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದರೂ, ರಾಜ್ಯ ಸರ್ಕಾರ ತಾ. 25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಬೆಳಗಾವಿ ನಿವಾಸಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಎಂಬವರು ವಿಶೇಷ ಮನವಿ ಅರ್ಜಿ (ಎಸ್‍ಎಲ್‍ಪಿ) ಸಲ್ಲಿಸಿದ್ದು, ಪರೀಕ್ಷೆ ನಡೆಸಲು ನಿರ್ಧರಿಸುವ ಮೂಲಕ ಸರ್ಕಾರ ಅಪ್ರಾಪ್ತ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಣಾಧಿಕಾರಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ. ಆದರೆ, ಈ ಅಂಶಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಲು ನಿರಾಕರಿಸಿದೆ ಎಂದಿದ್ದಾರೆ. ರಾಜ್ಯದಲ್ಲಿ ತಾ. 25 ರಿಂದ ಜು. 4 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಸುಮಾರು 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರೊಂದಿಗೆ ಇವರ ಪೋಷಕರು ಕೂಡ ಪ್ರಯಾಣ ಮಾಡುವ ಸಾಧ್ಯತೆಯಿದೆ. ರಾಜ್ಯಾದ್ಯಂತ 3 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ಕೇಂದ್ರದಲ್ಲೂ 500ಕ್ಕೂ ವಿದ್ಯಾರ್ಥಿಗಳಿರಲಿದ್ದಾರೆ.

ಪುದುಚೇರಿಯಲ್ಲೂ ಪರೀಕ್ಷೆ ರದ್ದು

ಚೆನ್ನೈ, ಜೂ. 9: ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ತಮಿಳುನಾಡು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಿ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಸೋಮವಾರವಷ್ಟೇ ತೆಲಂಗಾಣ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಗೊಳಿಸಿತ್ತು. ತಮಿಳುನಾಡು ನಂತರ ಇದೀಗ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಪರೀಕ್ಷೆ ಇಲ್ಲದೆಯೇ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲು ನಿರ್ಧರಿಸಲಾಗಿದೆ.

ಆಗಸ್ಟ್‍ವರೆಗೂ ಶಾಲೆ ತೆರೆಯಲ್ಲ

ಉಡುಪಿ, ಜೂ. 9: ಆಗಸ್ಟ್‍ವರೆಗೂ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿಂದು ಮಾತನಾಡಿದ ಅವರು, ಯಾವುದೇ ಲಾಬಿ, ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಗಮನ ಏನಿದ್ದರೂ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವುದು. ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಶಾಲೆಯನ್ನು ಆರಂಭಿಸುವ ಬಗ್ಗೆ ನಾಳೆಯಿಂದ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಲಾಗುವುದು. ಪೋಷಕರಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗುವುದು. ಯಾವಾಗ ಶಾಲೆ ಪ್ರಾರಂಭಿಸಬೇಕು, ಹೇಗೆ ನಡೆಸಬೇಕು. ಪೋಷಕರ ಮನಸ್ಸಿನಲ್ಲಿ ಏನಿದೆ ಎಂಬದನ್ನು ಈ ಮೂಲಕ ತಿಳಿದುಕೊಳ್ಳುತ್ತೇವೆ ಎಂದರು.

ಆನ್‍ಲೈನ್ ಶಿಕ್ಷಣ ದಂಧೆಯಾಗಿದೆ

ಬೆಂಗಳೂರು, ಜೂ. 9: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಶಿಕ್ಷಣವನ್ನು ಕೂಡಾ ದುಡ್ಡುಮಾಡುವ ಹೊಸ ದಂಧೆಯಾಗಿ ಮಾಡಿಕೊಂಡಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ಶುರುವಾಗಿರುವ ಹಾವಳಿಯನ್ನು ಈ ಹಂತದಲ್ಲಿಯೇ ನಿಯಂತ್ರಿಸುವ ಕೆಲಸಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ಮುಂದಾಗಬೇಕು ಸಿದ್ದರಾಮಯ್ಯ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರವಾಗಿ ಬೋಧನಾ ಶುಲ್ಕ ಹೆಚ್ಚಿಸಿ, ವಿದ್ಯಾರ್ಥಿಗಳಿಂದ ವಸೂಲು ಮಾಡುತ್ತಿರುವ ದೂರುಗಳು ಬರುತ್ತಿವೆ. ತಕ್ಷಣ ಇತ್ತ ಗಮನಹರಿಸಿ ಶಿಕ್ಷಣ ಸಂಸ್ಥೆಗಳ ಲೂಟಿಯನ್ನು ನಿಲ್ಲಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ

ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್

ಬೆಂಗಳೂರು, ಜೂ. 9: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಆಯ್ಕೆ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಶಾಕ್ ನೀಡಿದೆ. ಪಕ್ಷ ನಿಷ್ಠ ಕಾರ್ಯಕರ್ತರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಬಿಜೆಪಿಯ ರಾಜ್ಯ ಮುಖಂಡರಿಗೆ ಪ್ರಬಲ ಸಂದೇಶ ರವಾನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ನಾಯಕರು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭಾ ಟಿಕೆಟ್ ಕೊಡುವ ಮೂಲಕ ಕಾರ್ಯಕರ್ತರಿಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಬೇರೆ ಹೆಸರು ಚರ್ಚೆ ಮಾಡಲಾಗಿತ್ತು. ಆದರೂ ಬಿಜೆಪಿ ವರಿಷ್ಠರು ಸಾಮಾನ್ಯ ಕಾರ್ಯಕರ್ತರಿಗೆ ಮಣೆಹಾಕಿದ್ದಾರೆ ಎಂದರು. ಪಕ್ಷದ ನಾಯಕರ ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುವುದಾಗಿಯೂ ಅವರು ಹೇಳಿದರು.

ನಾಮಪತ್ರ ಸಲ್ಲಿಸಿದ ಹೆಚ್.ಡಿ. ದೇವೇಗೌಡ

ಬೆಂಗಳೂರು, ಜೂ. 9: ಮನಸು ಗಟ್ಟಿಮಾಡಿ ರಾಜ್ಯಸಭೆಗೆ ಸ್ಪರ್ಧಿಸಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಅವರ ಒತ್ತಡಕ್ಕಾಗಿ ತಾವು ಸ್ಪರ್ಧಿಸದೇ ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ತಾ. 5 ರಂದು ನಡೆದ ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ತೀರ್ಮಾನದಂತೆ ಕಣಕ್ಕಿಳಿದಿದ್ದೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ರಾಜ್ಯಸಭೆಗೆ ಜೆಡಿಎಸ್‍ನಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಾವುಕರಾಗಿ ಮಾತನಾಡಿದ ಅವರು, ತಮ್ಮ ಜೀವಮಾನದುದ್ದಕ್ಕೂ ಜಾತ್ಯತೀತ ತತ್ವ ಅನುಸರಿಸಿಕೊಂಡು ಬಂದಿದ್ದು, ಮುಂದೆಯೂ ಇದೇ ನಿಲುವಿಗೆ ಬದ್ಧನಾಗಿರುತ್ತೇನೆ ಎಂದರು. ಕಳೆದ ಲೋಕಸಭಾ ಚುನಾವಣೆಗೆ ಮೊದಲೇ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದೆ. ಆದರೆ ವಿಧಿ ಸ್ಪರ್ಧಿಸುವಂತೆ ಮಾಡಿತು. ಆದರೆ ಸ್ಪರ್ಧಿಸಿ ಸೋಲುಂಡೆ. ನಂತರ ಮತ್ತೆ ಮನಸು ಗಟ್ಟಿಮಾಡಿಕೊಂಡು ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಬೇಡವೆಂದು ತೀರ್ಮಾನಿಸಿದ್ದೆ. ಪಕ್ಷ ಸಂಘಟನೆಯನ್ನಷ್ಟೇ ಮಾಡಿಕೊಂಡು ಇರೋಣ ಎಂದು ನಿರ್ಧರಿಸಿದ್ದೆ. ಆದರೆ ಪಕ್ಷದ ಶಾಸಕರು ರಾಜ್ಯಸಭೆಗೆ ಹೋಗಬೇಕೆಂದು ಒತ್ತಾಯಿಸಿದರು ಎಂದರು.

ತಾ. 29ಕ್ಕೆ ವಿಧಾನ ಪರಿಷತ್ ಚುನಾವಣೆ

ಬೆಂಗಳೂರು, ಜೂ. 9: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು ತಾ. 29ಕ್ಕೆ 7 ಸ್ಥಾನಕ್ಕಾಗಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ತಾ. 29 ರಂದು ಮತದಾನ ನಡೆದು ಅಂದು ಸಂಜೆಯೇ ಫಲಿತಾಂಶ ಘೋಷಣೆಯಾಗಲಿದೆ. ತಾ. 11ಕ್ಕೆ ಅಧಿಸೂಚನೆ ಹೊರಬೀಳಲಿದ್ದು ತಾ. 18 ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿರಲಿದೆ. ತಾ. 19 ನಾಮಪತ್ರಗಳ ಪರಿಶೀಲನೆ ನಡೆದರೆ 22 ನಾಮಪತ್ರ ಹಿಂಪಡೆಯಲು ಕಡೇ ದಿನ. ತಾ. 29 ರಂದು ಮತದಾನ ನೆರವೇರಲಿದೆ. ವಿಧಾನ ಸಭೆಯಿಂದ ಆಯ್ಕೆಗೊಂಡ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಹೆಚ್.ಎಂ. ರೇವಣ್ಣ, ಟಿ.ಎ. ಸರವಣ ಹಾಗೂ ಡಿ.ಯು. ಮಲ್ಲಿಕಾರ್ಜುನ ಅವರುಗಳ ಅವಧಿ ಪೂರ್ಣವಾಗುವ ಹಿನ್ನೆಲೆ ಆ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸಂಖ್ಯಾಬಲ ಆಧಾರವನ್ನು ಹಿನ್ನೆಲೆಯಾಗಿಟ್ಟು ಹೇಳಿದರೆ ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನವನ್ನು ತಮ್ಮದಾಗಿಸಿಕೊಳ್ಳಲಿದೆ.

ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

ಬೆಂಗಳೂರು, ಜೂ. 9: ಜೂನ್ 14 ರಂದು ನಡೆಸಲು ಉದ್ದೇಶಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅನುಮತಿ ನಿರಾಕರಿಸಿದೆ. ಲಾಕ್‍ಡೌನ್ ನಿಯಮ ಉಲ್ಲೇಖಿಸಿ ಅನುಮತಿ ನೀಡಲು ನಿರಾಕರಿಸಿದ್ದು, ತಾ. 30 ರವರೆಗೆ ದೇಶದಲ್ಲಿ ಲಾಕ್‍ಡೌನ್ ಇರುವ ಹಿನ್ನೆಲೆ ಕೆಪಿಸಿಸಿ ಕಾರ್ಯಕ್ರಮಕ್ಕೂ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದೆ.