ಮಡಿಕೇರಿ, ಜೂ. 9: ಕೊಡಗು ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛ ಗ್ರಾಮ-ಸ್ವಚ್ಛ ಪರಿಸರ ಪಾಕ್ಷಿಕಾಚರಣೆಯು ತಾ. 5 ರಿಂದ 19 ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನ ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಅರಿವಿನ ಕಾರ್ಯಕ್ರಮ ಆಚರಿಸುತ್ತಿದ್ದು, ಈ ಪ್ರಯುಕ್ತ ಸಾಂಸ್ಥಿಕ ಮತ್ತು ಗೃಹೋತ್ಪಾದಿತ ತ್ಯಾಜ್ಯ ನೀರಿನ ಸೂಕ್ತ ವಿಲೇವಾರಿ ಕುರಿತಂತೆ ಕಿರುಚಿತ್ರ, ಯಶೋಗಾಥೆ ಲೇಖನ, ಮಾದರಿ ತಯಾರಿಸುವ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಿದ್ದು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ದ್ರವ ತ್ಯಾಜ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕವಾಗಿ, ಸಾಂಪ್ರದಾಯಿಕವಾಗಿ ಅಳವಡಿಸಿಕೊಂಡು ಸ್ವಚ್ಛತೆ ಕಾಪಾಡಿಕೊಂಡು ಬಂದಿರುವ ಕುರಿತು ಹಾಗೂ ವಿನೂತನ ಮಾದರಿ ಇಂಗುಗುಂಡಿ ಅಳವಡಿಸಲು ಸಿದ್ಧಪಡಿಸಿದ ಮಾದರಿಗಳನ್ನು ಸಾರ್ವಜನಿಕರಿಂದ, ಸ್ವಯಂ ಸೇವಾ ಸಂಸ್ಥೆಗಳಿಂದ, ಶಾಲೆ, ಕಾಲೇಜು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಕಿರುಚಿತ್ರ, ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನೊಳಗೊಂಡ ಯಶೋಗಾಥೆ (ಲೇಖನ), ಇಂಗು ಗುಂಡಿಯ ವಿನೂತನ ಮಾದರಿ(ಮಾಡಲ್)ಗಳನ್ನು ನಿಗದಿತ ಅರ್ಜಿಯೊಂದಿಗೆ ತಾ. 20 ರೊಳಗೆ ಸಲ್ಲಿಸಬಹುದಾಗಿದೆ.
ಉತ್ತಮ ಮತ್ತು ವಿನೂತನ ದ್ರವ ತ್ಯಾಜ್ಯ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಂಡಿರುವಂತಹ ಮಾದರಿ ಕಿರುಚಿತ್ರ, ಯಶೋಗಾಥೆ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಉತ್ತಮ ಮಾದರಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತೀಯ ರೂ. 5 ಸಾವಿರ ಬಹುಮಾನವನ್ನು ನೀಡಲಾಗುವುದು.
ಜಿಲ್ಲೆಯಲ್ಲಿ ಆಯ್ಕೆಯಾದ ಪ್ರಥಮ ಬಹುಮಾನ ಪಡೆದವರನ್ನು ರಾಜ್ಯ ಮಟ್ಟದ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ ಮಿಷನ್(ಗ್ರಾ) ಶಾಖೆ, ಜಿಲ್ಲಾ ನೆರವು ಘಟಕ ಅಥವಾ ಆಯಾಯ ತಾಲೂಕು ಪಂಚಾಯಿತಿಗಳನ್ನು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಣsಛಿಞoಜಚಿgu@gmಚಿiಟ.ಛಿomಗೆ ಕಳುಹಿಸುವಂತೆ ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.