ಸೋಮವಾರಪೇಟೆ, ಜೂ. 9: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ, ವಲ್ಲಭಭಾಯಿ ಬಡಾವಣೆ ಸಂಪರ್ಕಿಸುವ ಬೇಳೂರು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಯೋಗ್ಯವಾಗಿದ್ದು, ತಕ್ಷಣ ದುರಸ್ತಿ ಕಾರ್ಯಕೈಗೊಳ್ಳದಿದ್ದಲ್ಲಿ ಬಾಳೆಗಿಡನೆಟ್ಟು ಪ್ರತಿಭಟಿಸುವದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ವಲ್ಲಬಾಯಿ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಗುಂಡಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದg Éಯಾಗಿದೆ. ನಗರೋತ್ಥಾನ ಸೇರಿದಂತೆ ಯಾವೊಂದು ಯೋಜನೆಯಡಿ ಯಲ್ಲೂ ರಸ್ತೆ ದುರಸ್ತಿಗೆ ಅನುದಾನ ಒದಗಿಸಿಲ್ಲ.

ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುವದರಿಂದ ವಾಹನಗಳು ಚಲಿಸುವ ಸಂದರ್ಭ ಪಾದಚಾರಿಗಳಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ಗ್ಯಾಸ್ ಗೋಡಾನ್‍ಗೆ ಇದೆ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ರಸ್ತೆಯ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಹಲವಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಎಸ್.ಜೆ.ಎಂ. ಬಾಲಿಕಾ ಪ್ರೌಢ ಶಾಲೆಯಿಂದ ಕರ್ಕಳ್ಳಿ ಮೂಲಕ ಬೇಳೂರು, ಕುಶಾಲನಗರ ಸಂಪರ್ಕಿಸುವ ರಸ್ತೆ ಕಳೆದ ಹಲವಾರು ವರ್ಷಗಳಿಂದ ಗುಂಡಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.

ಈ ರಸ್ತೆಯ ಬಗ್ಗೆ ಪಟ್ಟಣ ಪಂಚಾಯ್ತಿ ನಿರ್ಲಕ್ಷ್ಯವಹಿಸಿದ್ದು, ಒಂದು ವಾರದೊಳಗೆ ರಸ್ತೆ ದುರಸ್ತಿ ಪಡಿಸದಿದ್ದರೆ ಮುಂದಿನ ಸೋಮವಾರ ರಸ್ತೆಯ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸುವದಾಗಿ ಅಲ್ಲಿನ ನಿವಾಸಿಗಳು ಶಾಸಕ ರಂಜನ್ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ, ಸ್ಪಂದಿಸಿದ ಶಾಸಕರು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಪ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಟ್ಟಣ ಪಂಚಾಯ್ತ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಅಭಿಯಂತರ ಹೇಮಂತ್ ಅವರಿಗೆ, ತಕ್ಷಣವೇ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ಮುಂದಿನ ಅನುದಾನದಲ್ಲಿ ರಸ್ತೆ ಸಂಪೂರ್ಣ ಡಾಂಬರೀಕರಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ.