ಮಡಿಕೇರಿ, ಜೂ. 9 : ಜಾಗತಿಕ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ದಿಸೆಯಲ್ಲಿ ಭಾರತ ಲಾಕ್‍ಡೌನ್ ನಡುವೆ, ಅತಂತ್ರರಾಗಿದ್ದ ಕಟ್ಟಡ ಕಾರ್ಮಿಕರಿಗಾಗಿ ಕೇಂದ್ರ ಸರಕಾರ ಪ್ರಕಟಿಸಿರುವ ರೂ. 5 ಸಾವಿರ ಮೊತ್ತದ ನೆರವು ಜಿಲ್ಲೆಯ 2272 ಮಂದಿ ನೋಂದಾಯಿತ ಕಾರ್ಮಿಕರಿಗೆ ಲಭಿಸಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 4757 ಮಂದಿ ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ ಬ್ಯಾಂಕ್ ಖಾತೆ ಇತ್ಯಾದಿಗಳ ಸಮರ್ಪಕ ಮಾಹಿತಿಯುಳ್ಳ, 2272 ಮಂದಿ ತಲಾ ರೂ. 5 ಸಾವಿರ ನೆರವಿಗೆ ಈಗಾಗಲೇ ಭಾಜನರಾಗಿದ್ದಾರೆ.

ಇನ್ನುಳಿದಂತೆ 2485 ಮಂದಿ ಇಲಾಖೆಗೆ ಸೂಕ್ತ ಮಾಹಿತಿ ಒದಗಿಸದಿರುವದು ಸೇರಿದಂತೆ, ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ವಿವರಣೆ ನೀಡಿಲ್ಲದ ಕಾರಣ ಸಂಬಂಧಿಸಿದವರಿಗೆ ಹಣ ಪಾವತಿಯಾಗಿಲ್ಲವೆಂದು ಇಲಾಖೆಯ ಮೂಲಗಳಿಂದ ಗೊತ್ತಾಗಿದೆ. ಆಟೋ ಟ್ಯಾಕ್ಸಿ : ಅಂತೆಯೇ ಆಟೋರಿಕ್ಷಾ ಹಾಗೂ ಬಾಡಿಗೆ ವಾಹನ ಚಾಲಕರಿಗೆ ರೂ. 5 ಸಾವಿರದಂತೆ ನೆರವು ಘೋಷಿಸಲ್ಪಟ್ಟಿದೆ. ಅಂತಹವರು ನೇರವಾಗಿ ‘ಸೇವಾಸಿಂಧು’ ಅಡಿಯಲ್ಲಿ ಅರ್ಜಿಯನ್ನು ಆನ್‍ಲೈನ್ ಮೂಲಕ ಬೆಂಗಳೂರು ಪ್ರಾದೇಶಿಕ ಆಯುಕ್ತರ ಅರ್ಜಿಯನ್ನು ಆನ್‍ಲೈನ್ ಮೂಲಕ ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಗೆ ಸಲ್ಲಿಸಿ ಪ್ರಯೋಜನ ಪಡೆದಿರುವ ಕಾರಣ, ಜಿಲ್ಲಾಡಳಿತಕ್ಕೆ ಸಮರ್ಪಕ ಅಂಕಿ ಅಂಶ ಲಭಿಸಿಲ್ಲವೆಂದು ಗೊತ್ತಾಗಿದೆ.