ಮಡಿಕೇರಿ, ಜೂ. 9: ಮಡಿಕೇರಿ ನಗರಸಭೆಯ ಆಸ್ತಿ-ತೆರಿಗೆ ಮುಗಿಯದ ಸಮಸ್ಯೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕುಳಿತು ಮಡಿಕೇರಿಯ ವಿವರಗಳನ್ನು ಕಂಪ್ಯೂಟರ್ ಒಳಗೆ ತುರುಕಿಸುವವರಿಗೆ ನಂತರದ ಪರಿಣಾಮವೇ ಅರ್ಥ ವಾಗುವುದಿಲ್ಲ. ಇಲ್ಲಿ ಕಚೇರಿಯಲ್ಲಂತೂ ಈ ಬಗ್ಗೆ ವಿಚಾರಿಸಿದರೆ ಅಸಹಾಯಕತೆ ಯನ್ನಷ್ಟೇ ವ್ಯಕ್ತಪಡಿಸುತ್ತಾರೆ.ಕಳೆದ ವರ್ಷ ನಿವೇಶನದ ದರಗಳನ್ನೇ ಏರುಪೇರು ಮಾಡಿ ಅದನ್ನು ಸರಿಪಡಿಸುವಷ್ಟರಲ್ಲಿ ನಗರಸಭೆ ಹಾಗೂ ಜನತೆ ಹೈರಾಣಾಗಿದ್ದು ನೆನಪಿದೆ. ಈ ಬಾರಿ ಬೇರೊಂದು ಸಮಸ್ಯೆ. ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಸಿದಲ್ಲಿ ಶೇ. 5 ರ ರಿಯಾಯಿತಿ ಇದ್ದರೂ ತೆರಿಗೆದಾರರು ಪಡೆಯುವ ಮುದ್ರಿತ ಅರ್ಜಿಯಲ್ಲಿ ಅದು ಸೊನ್ನೆ ಎಂದು ತೋರಿಸುತ್ತಿದೆ. ಮತ್ತೊಂದೆಡೆ ಪಾವತಿಸಬೇಕಾದ ಒಟ್ಟು ಮೊತ್ತ ರೂ. 10,294/- ಇದ್ದರೆ ಮುದ್ರಣದಲ್ಲಿ ಅದು ರೂ. 20,589/- ಎಂದು ತೋರಿಸುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಪ್ರತಿವರ್ಷ ಕಳೆಯಬೇಕಾದ ಸವಕಳಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬಿಲ್ ಬರುತ್ತಿದೆ. ಕೆಲವರಿಗೆ ಘನತ್ಯಾಜ್ಯ ಉಪಕರದಲ್ಲಿ ರೂ. 180/- ರ ಬದಲಿಗೆ ರೂ. 360/- ಬರುತ್ತಿದೆ. ಕೆಲವೊಮ್ಮೆ ನಿವೇಶನಗಳ ದರದಲ್ಲಿಯೂ ಕಳೆದ ವರ್ಷಕ್ಕೂ ಈ ವರ್ಷಕ್ಕೂ ವ್ಯತ್ಯಾಸ ಕಂಡುಬಂದಿದೆ.