ಕೂಡಿಗೆ, ಜೂ. 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪ ದಲ್ಲಿರುವ ಬ್ಯಾಡಗೊಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡುವ ವಿಷÀಯಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆದಿದ್ದವು.

ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡುವ ವಿಚಾರವಾಗಿ ಕಳೆದ ವಾರ ಅಲ್ಲಿನ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿತ್ತು. ನಂತರ ಸ್ಥಳಕ್ಕೆ ಬಂದ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ವರ್ಗದವರು ಮಂಗಳವಾರ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ಕಸ ವಿಲೇವಾರಿ ಘಟಕ ಸಾಧಕ ಭಾದಕಗಳ ಚರ್ಚೆ ನೆಡೆಸಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ ಇಂದು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಗ್ರಾಮಸ್ಥರು ಹಾಡಿಯ ಒಳಗಡೆ ಯಾವುದೇ ವಾಹನವನ್ನು ಬಿಡದೆ ಪ್ರತಿಭಟನೆಯ ಮಾದರಿಯಲ್ಲಿ ಅಧಿಕಾರಿಗಳಿಗಾಗಿ ಕಾದುಕುಳಿತಿದ್ದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ದಿನದ ಕೆಲಸವನ್ನು ಬಿಟ್ಟು ಕಾದರೂ ಅಧಿಕಾರಿಗಳು ಬರಲಿಲ್ಲ. ಈ ಹಾಡಿಯ 350 ಕುಟುಂಬದ ಸದಸ್ಯರು ಇಂದು ಯಾವುದೇ ಕೆಲಸಗಳಿಗೆ ಹೊಗದೆ ಅಧಿಕಾರಿಗಳಿಗಾಗಿ ಕಾಯುತ್ತಿದ್ದರು. ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಕ್ಕೆ ಬರುವುದಾಗಿ ಹೇಳಿದ ಅಧಿಕಾರಿಗಳು ಬಾರದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹಾಡಿಯ ಪ್ರಮುಖರಾದ ಅಪ್ಪು, ಶಂಕರ, ಮುತ್ತ, ಗಣೇಶ, ರಾಜ, ಗಿರಿಯಾ, ಕುಮಾರ್, ಕಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.